ಬೇಸಿಗೆ ಕಾಲ | ಕೋರ್ಟ್ ಕಲಾಪ ವೇಳೆ ವಕೀಲರ ಕಪ್ಪು ಕೋಟ್ ಗೆ ವಿನಾಯಿತಿ: ಕರ್ನಾಟಕ ವಕೀಲರ ಪರಿಷತ್
ಬೆಂಗಳೂರು, ಎ.27: ಬೇಸಿಗೆ ಕಾಲದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಹೊರತುಪಡಿಸಿ ಅಧೀನ ನ್ಯಾಯಾಲಯಗಳಿಗೆ ಹಾಜರಾಗುವ, ವಾದ ಮಂಡಿಸುವ ಅಥವಾ ಕಲಾಪಗಳಲ್ಲಿ ಸಕ್ರಿಯರಾಗುವ ವಕೀಲರು ಕಪ್ಪು ಕೋಟ್ ಧರಿಸುವುದು ಕಡ್ಡಾಯವಲ್ಲ ಎಂದು ಕರ್ನಾಟಕ ವಕೀಲರ ಪರಿಷತ್ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ರಘು ಅವರು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ವಸ್ತ್ರಸಂಹಿತೆ ಬಗ್ಗೆ ವಕೀಲರ ಸಮುದಾಯಕ್ಕೆ ಮಾಹಿತಿ ಒದಗಿಸುವಂತೆ ಕೋರಿದ್ದಾರೆ.
ವಸ್ತ್ರ ಸಂಹಿತೆ ಪ್ರಕಾರ ಬೇಸಿಗೆ ಕಾಲದಲ್ಲಿ ವಿಚಾರಣಾ ನ್ಯಾಯಾಲಯಗಳಿಗೆ ಪುರುಷ ವಕೀಲರು ಬಿಳಿ ಶರ್ಟ್, ಪಟ್ಟಿಯುಳ್ಳ ಕಪ್ಪು ಅಥವಾ ಬೂದು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬ್ಯಾಂಡ್‍ನೊಂದಿಗೆ ಹಾಜರಾಗಬಹುದು. ಮಹಿಳಾ ವಕೀಲರು ಸೀರೆ ಅಥವಾ ಉದ್ದನೆಯ ಸ್ಕರ್ಟ್‍ಗಳಲ್ಲಿ(ಬಿಳಿ ಅಥವಾ ಕಪ್ಪು ಅಥವಾ ಯಾವುದೇ ಮುದ್ರೆ ಅಥವಾ ವಿನ್ಯಾಸವಿಲ್ಲದ) ಅಥವಾ ಪಂಜಾಬಿ ಉಡುಗೆ ಅಥವಾ ಚೂಡಿದಾರ್ ಕುರ್ತಾ ಅಥವಾ ಸಲ್ವಾರ್ ಕುರ್ತಾ(ಬಿಳಿ ಅಥವಾ ಕಪ್ಪು) ಬಿಳಿ ಬ್ಯಾಂಡ್‍ನೊಂದಿಗೆ ಹಾಜರಾಗಬಹುದು.