ಅಭ್ಯರ್ಥಿಗಳು, ಭಾಷಣ ಇಲ್ಲದೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ

ಬಿಜೆಪಿ ಕಾರ್ಯಕರ್ತರ ಜೈಕಾರ

Update: 2023-04-29 17:05 GMT

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮತ ಪ್ರಚಾರ ಆರಂಭಿಸಿದ ಪ್ರಧಾನಿ ಮೋದಿ ಅವರು ಪಕ್ಷದ ಅಭ್ಯರ್ಥಿಗಳು, ಭಾಷಣ, ವೇದಿಕೆ ಕಾರ್ಯಕ್ರಮಗಳಿಲ್ಲದೆ ವಿಭಿನ್ನವಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ರಸ್ತೆಯುದ್ದಕ್ಕೂ ಜೈಕಾರ ಮೊಳಗಿಸಿದರು.

ಶನಿವಾರ ಸಂಜೆ 6.15ಕ್ಕೆ ನಗರದ ತುಮಕೂರು ರಸ್ತೆಯಲ್ಲಿರುವ ನೈಸ್ ರಸ್ತೆ ಜಂಕ್ಷನ್‍ಗೆ ಆಗಮಿಸಿದ ಪ್ರಧಾನಿ ಮೋದಿ, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ನೈಸ್ ರೋಡ್ ಜಂಕ್ಷನ್ ನಿಂದ ಆರಂಭಗೊಂಡ ರೋಡ್ ಶೋ ಸುಮನಹಳ್ಳಿ ಸರ್ಕಲ್ ವರೆಗೂ ಸಾಗಿತು. ರಸ್ತೆಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಜನರು ಪ್ರಧಾನಿ ನರೇಂದ್ರ ಮೋದಿಗೆ ಜೈಕಾರಹಾಕಿ, ಸ್ವಾಗತಿಸಿದರು. ಒಟ್ಟು 5.5 ಕಿಲೋ ಮೀಟರ್ ವರೆಗೂ 45 ನಿಮಿಷಗಳ ಕಾಲ ರೋಡ್ ಶೋ ನಡೆಸಲಾಯಿತು. ಇಡೀ ರೋಡ್ ಶೋನಲ್ಲಿ ಯಾವುದೇ ಅಭ್ಯರ್ಥಿಗಳ ಪರ ಪ್ರಚಾರವಾಗಲಿ, ಮೋದಿ ಭಾಷಣವಾಗಲಿ ಇರಲಿಲ್ಲ.

ಇನ್ನೂ ಪ್ರಧಾನಿ ಮೋದಿ ಜೊತೆ ತೆರೆದ ವಾಹನದಲ್ಲಿ ಅಭ್ಯರ್ಥಿಗಳಿಲ್ಲದಿದ್ದರೂ ಆಯಾ ಕ್ಷೇತ್ರ ವ್ಯಾಪ್ತಿಗೆ ರೋಡ್ ಶೋ ಬಂದಾಗ ಸ್ವಾಗತಿಸುವ ಕೆಲಸವನ್ನು ಅಭ್ಯರ್ಥಿಗಳು ಮಾಡಿದರು. ಅಲ್ಲದೆ ತಮ್ಮ ಬೆಂಬಲಿಗರನ್ನು ಸೇರಿಸಿ ಶಕ್ತಿ ಪ್ರದರ್ಶನವನ್ನು ಮಾಡಿದರು. ರೋಡ್ ಶೋ ಮುಗಿಸಿದ ನಂತರ ನೇರವಾಗಿ ಪ್ರಧಾನಿ ಮೋದಿ ರಾಜಭವನಕ್ಕೆ ತೆರಳಿದರು.

ರಾಜಭವನದಲ್ಲಿಯೇ ಇಂದು ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ, ರವಿವಾರ(ಎ.30) ಬೆಳಗ್ಗೆ ಕೋಲಾರಕ್ಕೆ ತೆರಳಲಿದ್ದು, ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಆನಂತರ, ಚನ್ನಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದು, ಕಡೆಯದಾಗಿ ಬೇಲೂರಿನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡಿ ಹೊಸದಿಲ್ಲಿಗೆ ವಾಪಸ್ಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Similar News