ಕಸಾಪ ಶತಮಾನೋತ್ಸವ ಪ್ರಶಸ್ತಿಗೆ ಮನು ಬಳಿಗಾರ ಆಯ್ಕೆ

Update: 2023-04-30 18:27 GMT

ಬೆಂಗಳೂರು, ಎ.30: ಕನ್ನಡ ಸಾಹಿತ್ಯ ಪರಿಷತ್ತು ಪ್ರದಾನ ಮಾಡುವ 2022ನೆ ಸಾಲಿನ ‘ಶತಮಾನೋತ್ಸವ ದತ್ತಿ ಪ್ರಶಸ್ತಿ’ಗೆ ಕಸಾಪ ಮಾಜಿ ಅಧ್ಯಕ್ಷ ನಾಡೋಜ ಮನು ಬಳಿಗಾರ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 50 ಸಾವಿರ ರೂ.ಮೊತ್ತವನ್ನು ಹೊಂದಿದೆ. 

ಕಸಾಪ ಸಿಬ್ಬಂದಿಗಳಿಗಾಗಿ ಮಿಸಲಿಟ್ಟಿರುವ ‘ಎನ್.ರಮಾದೇವಿ ವಿಶ್ವೇಶ್ವರಯ್ಯ ದತ್ತಿ’ ಹಾಗೂ ‘ವಿ ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ ದತ್ತಿ’ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2022ನೆ ಸಾಲಿನ ‘ಎನ್. ರಮಾದೇವಿ ವಿಶ್ವೇಶ್ವರಯ್ಯ ದತ್ತಿ’ಗೆ ಪರಿಷತ್ತಿನ ಸಿಬ್ಬಂದಿ ಎಚ್.ಮಂಜುಳಾ, ‘ವಿ.ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ ದತ್ತಿ’ ಪ್ರಶಸ್ತಿಗೆ ಪರಿಷತ್ತಿನ ಸಿಬ್ಬಂದಿ ಎನ್.ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ದತ್ತಿನ ದಾನಿಗಳು ಈ ಬಾರಿ ಹೆಚ್ಚುವರಿಯಾಗಿ ಮೂರು ಜನ ಕನ್ನಡ ಸಾಹಿತ್ಯ ಪರಿಷತ್ತಿನ ನಿವೃತ್ತ ಸಿಬ್ಬಂದಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪರಿಷತ್ತಿನ ನಿವೃತ್ತ ಸಿಬ್ಬಂದಿಗಳಾದ ಎ.ಅಮರನಾಥ್, ನಾ.ಚಕ್ರಪಾಣಿ ಹಾಗೂ ಕೆ.ರಾಮೇಗೌಡ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮೇ 5ರಂದು ನಡೆಯಲಿರುವ ಕಸಾಪ ಸಂಸ್ಥಾಪನಾ ದಿನಾಚರಣೆಯಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Similar News