ಬೆಂಗಳೂರು ಬೆಳವಣಿಗೆಗೆ ವಲಸಿಗರ ಕೊಡುಗೆ: ತೇಜಸ್ವಿ ಸೂರ್ಯ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

Update: 2023-05-02 11:36 GMT

ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿಗೆ ವಲಸಿಗರೇ ಪ್ರಮುಖ ಕಾರಣ ಎನ್ನುವ ರೀತಿ ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ತೇಜಸ್ವಿ ಸೂರ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ  ''ನೀವೆಲ್ಲರೂ ನಗರದ ಬೆಳವಣಿಗೆಗೆ, ಸಂಪತ್ತಿಗೆ ಕೊಡುಗೆ ನೀಡಿದ್ದೀರಿ, ಬೆಂಗಳೂರಿಗನ ಸಾಧನೆಯ ಶ್ರೇಯಸ್ಸು ನಿಮ್ಮಂತಹ ಹೊಸ ವಲಸಿಗ ಬೆಂಗಳೂರಿಗರಿಗೆ ಸಲ್ಲಬೇಕು, ಉತ್ತರ ಪ್ರದೇಶ, ಜಾರ್ಖಂಡ್‌ ನಿಂದ ಇಲ್ಲಿಗೆ ಬಂದು ಇಲ್ಲಿ ಬಹಳ ಕೊಡುಗೆ ನೀಡಿದ್ದೀರಿ'' ಎಂದು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. 

ತೇಜಸ್ವಿ ಸೂರ್ಯ ಅವರ ಭಾಷಣದ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ''ನಂದಿನಿ ಮುಳುಗಿದರೂ ತೊಂದರೆ ಇಲ್ಲ, ಅಮೂಲ್ ಬರಲಿ ಎನ್ನುವ ಬಿಜೆಪಿ ಈಗ "ಬೆಂಗಳೂರು ಉದ್ದಾರವಾಗಿದ್ದೇ ಉತ್ತರ ಭಾರತೀಯರಿಂದ" ಎಂದು ಘೋಷಿಸಿದೆ. ವಲಸಿಗರಿಗೆ ಕೊಡುವ ಅರ್ಧದಷ್ಟು ಬೆಲೆ, ಪ್ರಾಮುಖ್ಯತೆಯನ್ನು ಕನ್ನಡಿಗರಿಗೆ ಕೊಡದಿರುವುದೇಕೆ ನಾಡದ್ರೋಹಿ ಬಿಜೆಪಿ? ಕನ್ನಡಿಗರೇ ಎಚ್ಚರ, ಕರ್ನಾಟಕವನ್ನು ಉತ್ತರ ಭಾರತೀಯರ ಕೈಗಿಡಲಿದೆ ಬಿಜೆ'' ಎಂದು ಆಕ್ರೋಶ ವ್ಯಕ್ತಪಡಿಸಿದೆ. 

ಇನ್ನು ರೂಪೇಶ್ ರಾಜಣ್ಣ ಟ್ವೀಟ್ ಮಾಡಿ, 'ಎಲ್ಲವೂ ವೊಟ್ ಗಾಗಿ. ಬೆಂಗಳೂರು ಇವತ್ತು ಅಭಿವೃದ್ಧಿ ಹೊಂದಿದ ನಗರ ಆಗೋಕೆ ಕಾರಣವೇ ವಲಸಿಗರು ಅನ್ನೋ ಹೇಳಿಕೆ ಕೊಡುತ್ತಿರೋ @Tejasvi_Surya ನಾಚಿಕೆ ಆಗ್ಬೇಕು. ನಾಳೆ ಇಡೀ ಕರ್ನಾಟಕ ಕಟ್ಟಿದ್ದೆ ನೀವೇ ಅಂತ ಹೇಳೋಕು ಹೇಸೊಲ್ಲಾ, ಬೆಂಗಳೂರು ಇಂದು ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲೋಕೆ ಕಾರಣ ಕನ್ನಡಿಗರು ಮಹಾರಾಜರು, ಕೆಂಪೇಗೌಡರ ದೂರದೃಷ್ಟಿ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Similar News