ಕೊಲೆ ಯತ್ನ ಆರೋಪಿ ಪರವಾಗಿ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ವ್ಯಾಪಕ ಖಂಡನೆ

Update: 2023-05-06 05:47 GMT

ಬೆಂಗಳೂರು, ಮೇ 6-ಪ್ರಧಾನಿ ನರೇಂದ್ರ ಮೋದಿ ಅವರು  ರಾಜಧಾನಿ ಬೆಂಗಳೂರಿನಲ್ಲಿ ಮತ ಪ್ರಚಾರ ಭಾಗವಾಗಿ ಇಂದು ರೋಡ್ ಶೋ ನಡೆಸಲಿದ್ದು, ಇದರ ನಡುವೆ ಕೊಲೆ ಯತ್ನ ಆರೋಪ ಹೊತ್ತಿರುವ ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಎನ್.ಚಂದ್ರ ಪರ ಮತಯಾಚನೆಗೆ ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಶನಿವಾರ ಪ್ರಧಾನಿ ಮೋದಿ ಅವರು ಶಿವಾಜಿನಗರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎನ್.ಚಂದ್ರ ಪರ ಮತಯಾಚನೆ ನಡೆಸಲಿದ್ದಾರೆ. ಆದರೆ, ಕೊಲೆ ಯತ್ನ ಆರೋಪಿಯ ಪರ ಮೋದಿ ಬೀದಿಗಳಿಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವಾರು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಮುಕುಂದ್ ಗೌಡ, ಬಸವಣ್ಣನ ವಚನ "ಇವ ನಮ್ಮವ ಇವ ನಮ್ಮವ" ಎಂಬಂತೆ  ರೌಡಿ, ಕೊಲೆಗಾರರು, ವಂಚಕರು ಮತ್ತು ಸಮಾಜ ಘಾತುಕರೂ ನಮ್ಮವರೇ ಎಂದು ತೋರಿಸಲು ಹೊರಟಿದ್ದಾರೆ ಮೋದಿ. 

ಇದರಿಂದ ನಿಧಾನವಾಗಿ ಬಿಜೆಪಿ ಒಂದು ರೌಡಿಸಂ ಕೇಂದ್ರಿತ ಪಕ್ಷವಾಗುತ್ತಾ, ಜನರಲ್‌ ಟ್ರೆಂಡ್‌ ಆಗಿಬಿಡುತ್ತದೆ. ಒಂದು ರಾಷ್ಟ್ರೀಯ ಪಕ್ಷದ ನಾಯಕನಿಗೆ, ದೇಶದ ಪ್ರಧಾನಿಗೆ ಇಂಥಾ ಗತಿ ಬರಬಾರದಿತ್ತು ಎಂದು ಟೀಕಿಸಿದ್ದಾರೆ.

ಕಲಬುರಗಿ ಜಿಲ್ಲೆ ಚಿತ್ತಾಪುರ ಅಭ್ಯರ್ಥಿಯ ಕೇಸ್‌ ಗಳ ದೊಡ್ಡ ಪಟ್ಟಿ ಬಿಡುಗಡೆಯಾದಾಗ ಪ್ರಧಾನಿಗಳ ಪ್ರವಾಸ ರದ್ದುಗೊಂಡಂತೆ ನಾಟಕವಾಡಿದರು. ಈಗ ಶಿವಾಜಿನಗರದ ಸರದಿ. ದೇಶದ ಪ್ರಧಾನಿಗಿರುವ ಮಾಹಿತಿ ನೀಡುವ ಮೂಲಗಳ ಕಣ್ಣು ತಪ್ಪಿಸಿ ಇವೆಲ್ಲ ನಡೆಯುತ್ತವೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಆರ್ಶದ್ ಮಾತನಾಡಿ, ಬಿಜೆಪಿ ಒಂದು ನಾಟಕ ಪಕ್ಷವಾಗಿದೆ. ಸಮಾಜಘಾತಕರು ಯಾರ ಕಡೆ ಇದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಮುಂದೆ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಏನಿದು ಕೊಲೆ ಯತ್ನ ಪ್ರಕರಣ?

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್. ಚಂದ್ರ (49)  ವಿರುದ್ಧ ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರೂ ಆಗಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರ- ಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಅಮೃತಹಳ್ಳಿ ಠಾಣೆಯಲ್ಲಿ 2011ರಲ್ಲಿ ಪ್ರಕರಣ ದಾಖಲಾಗಿದೆ. 

65ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. ಇದೇ ಪ್ರಕರಣದಲ್ಲಿ ಚಂದ್ರ ಅವರ ಸಹೋದರ ಶರವಣನ್ (32) ಮತ್ತು ಮುನಿರೆಡ್ಡಿಪಾಳ್ಯದ ಮಂಜು ಅಲಿಯಾಸ್ ಭರತ್‌ಸಿಂಗ್ (27) ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಚಂದ್ರ ತಲೆಮರೆಸಿ ಕೊಂಡಿದ್ದರು. ನಂತರ, ಜಾಮೀನು ಸಿಕ್ಕಿತ್ತು. 

ಇದನ್ನೂ ಓದಿ: ಪ್ರಧಾನಿ ಮೋದಿ ರ‍್ಯಾಲಿ ಮಾರ್ಗಗಳಲ್ಲಿರುವ ಮರಗಳನ್ನು ತೆರೆವುಗೊಳಿಸುತ್ತಿರುವ BBMP

Similar News