80 ವರ್ಷ ಮೇಲ್ಪಟ್ಟ 75,690 ಮತದಾರರಿಂದ ಮನೆಯಲ್ಲಿ ಮತದಾನ: ರಾಜ್ಯ ಮುಖ್ಯ ಚುನಾವಣಾಧಿಕಾರಿ

Update: 2023-05-06 17:38 GMT

ಬೆಂಗಳೂರು, ಮೇ 6: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೇ 5ರ ವರೆಗೆ 80 ವರ್ಷ ಮೇಲ್ಪಟ್ಟ 80,250 ಮತದಾರರಲ್ಲಿ 75,690(ಶೇ.94.32) ಮತದಾರರು ತಮ್ಮ ಮನೆಯಲ್ಲಿ ಮತ ಚಲಾಯಿಸಿದ್ದಾರೆ. ಅದೇ ರೀತಿ 19,279 ವಿಶೇಷ ಚೇತನ ಮತದಾರರಲ್ಲಿ 18,636(ಶೇ.96.66) ಮತದಾರರು ತಮ್ಮ ಮನೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಚುನಾವಣೆ ಘೋಷಣೆಯಾದ ದಿನದಿಂದ ಮೇ 5ರವರೆಗೆ ನಗದು, ಉಚಿತ ವಸ್ತುಗಳು, ಮದ್ಯ, ಡ್ರಗ್ಸ್, ಮಾದಕ ವಸ್ತು ಮತ್ತು ಬೆಲೆಬಾಳುವ ಲೋಹಗಳನ್ನು ವಶಪಡಿಸಿಕೊಂಡಿರುವ ಮೌಲ್ಯವು ಅಂದಾಜು 365 ಕೋಟಿ ರೂ.ಆಗಿದೆ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯವರು ಮೇ 5ರಂದು 15.53 ಕೋಟಿ ರೂ.ನಗದು ಮತ್ತು 7.08 ಕೋಟಿ ರೂ.ಮೌಲ್ಯದ 10.14 ಕೆಜಿ ಬಂಗಾರ ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 4.77 ಕೋಟಿ ರೂ., ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 3.44 ಕೋಟಿ ರೂ., ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 3.35 ಕೋಟಿ ರೂ.ನಗದು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪುಲಿಕೇಶಿನಗರ ಕ್ಷೇತ್ರದಲ್ಲಿ 2.30 ಕೋಟಿ ರೂ., ಶಾಂತಿನಗರ ಕ್ಷೇತ್ರದಲ್ಲಿ 62.83 ಲಕ್ಷ ರೂ., ಗಾಂಧಿನಗರ ಕ್ಷೇತ್ರದಲ್ಲಿ 55 ಲಕ್ಷ ರೂ., ರಾಯಚೂರು ಕ್ಷೇತ್ರದಲ್ಲಿ 30 ಲಕ್ಷ ರೂ.ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಹೆಬ್ಬಾಳ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಜಯನಗರ ಕ್ಷೇತ್ರಗಳ ನಾಲ್ಕು ಸ್ಥಳಗಳಲ್ಲಿ 23.50 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಹೆಬ್ಬಾಳ(1), ಶಾಂತಿನಗರ(2), ಗಾಂಧಿನಗರದ ಒಂದು ಸ್ಥಳದಲ್ಲಿ 5 ಕೋಟಿ ರೂ.ಮೌಲ್ಯದ 6.59 ಕೆಜಿ ಬಂಗಾರವನ್ನು ವಶಪಡಿಸಿಕೊಂಡಿದೆ. ರಾಯಚೂರು ಕ್ಷೇತ್ರದಲ್ಲಿ 2.08 ಕೋಟಿ ರೂ.ಮೌಲ್ಯದ 3.55 ಕೆಜಿ ಬಂಗಾರವನ್ನು ವಶಪಡಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ, ವಿಚಕ್ಷಣ ದಳವು ಮೈಸೂರು ಜಿಲ್ಲೆಯ ಚಾಮರಾಜ ಕ್ಷೇತ್ರದಲ್ಲಿ 38ಲಕ್ಷ ರೂ.ನಗದು, ರೈಲ್ವೆ ಪೊಲೀಸರು ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ 25.20ಲಕ್ಷ ರೂ. ಮೌಲ್ಯದ 21 ಕೆಜಿ ಗಾಂಜಾ(ಮಾದಕ ವಸ್ತು)ವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

Similar News