ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ದೂರು

Update: 2023-05-06 17:57 GMT

ಬೆಂಗಳೂರು, ಮೇ 6: ‘ಮತಕ್ಕಾಗಿ ಕಾಂಗ್ರೆಸ್ ಭಯೋತ್ಪಾದಕರನ್ನು ಪೋಷಿಸುತ್ತಿದೆ’ ಎಂಬ ಪ್ರಧಾನಿ ಮೋದಿ ಅವರ ವಿರುದ್ಧ ಕಾಂಗ್ರೆಸ್ ಶನಿವಾರ ದೂರು ದಾಖಲಿಸಿದೆ.

ನಗರದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಸೇರಿ ರಾಜ್ಯ ಕಾಂಗ್ರೆಸ್ ನಾಯಕರು ದೂರು ನೀಡಿದ್ದು, ಪ್ರಧಾನಿ ಮೋದಿ ಅವರ ಹೇಳಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಳ್ಳಾರಿಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ್ದ ಮೋದಿ ಅವರು, ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಗಟ್ಟಿ ಮಾಡುವ ಉದ್ದೇಶದಿಂದ ಭಯೋತ್ಪಾದಕರನ್ನು ಪೋಷಿಸಿದೆ. ಭಯೋತ್ಪಾದಕರ ಜೊತೆಗೆ ನಂಟಿರುವವರ ಜೊತೆಗೆ ಕಾಂಗ್ರೆಸ್ ಹಿಂಬಾಗಿಲ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಮೋದಿ ಚುನಾವಣಾ ಪ್ರಚಾರದಲ್ಲಿ ಆಧಾರ ರಹಿತವಾದ ಆರೋಪವನ್ನು ಮಾಡಿದ್ದು, ಇಂತಹ ಆರೋಪವನ್ನು ಈವರೆಗೆ ಯಾವ ಪ್ರಧಾನಿಯೂ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರು ದೂರಿನಲ್ಲಿ ಉಲ್ಲೇಖಿಸಿ ಪ್ರಧಾನಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಮೋದಿ ಚುನಾವಣಾ ಪ್ರಚಾರದಲ್ಲಿ ಆಡಿರುವ ಈ ಮಾತುಗಳು ಐಪಿಸಿ ಸೆಕ್ಷನ್ 1860 ಹಾಗೂ ಜನಪ್ರತಿನಿಧಿಗಳ ಕಾಯ್ದೆ 1951ರ ಉಲ್ಲಂಘನೆ ಆಗಿದೆ ಎಂದು ಆರೋಪಿಸಲಾಗಿದ್ದು, ದೂರಿನ ಜೊತೆಗೆ ಪ್ರಧಾನಿ ಮೋದಿ ಭಾಷಣದ ವಿಡಿಯೋವನ್ನು ಪೊಲೀಸರಿಗೆ ನೀಡಲಾಗಿದೆ. ಈ ವೇಳೆ ಎಐಸಿಸಿ ವಕ್ತಾರ ಪವನ್ ಖೇರಾ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹಾಗೂ ಇತರರು ಉಪಸ್ಥಿತರಿದ್ದರು.

Similar News