ಓ ಮೆಣಸೇ ...

Update: 2023-05-07 18:32 GMT

ಬಿಜೆಪಿ ಜನರ ಭಾವನೆ, ಧರ್ಮದ ಮೇಲೆ ರಾಜಕೀಯ ಮಾಡುತ್ತಿದೆ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಅದಕ್ಕಾಗಿ ನೀವು, ಸಿದ್ರಾಮಯ್ಯನ ವಿರುದ್ಧ ಎಗರಾಡಿದ್ರಾಗತ್ತೇನ್ರೀ?

ನೆರೆಹೊರೆಯವರೊಂದಿಗೆ ಶಾಂತಿಗಾಗಿ ನಮ್ಮ ಪ್ರಯತ್ನವನ್ನು ದೌರ್ಬಲ್ಯವೆಂದು ಪರಿಗಣಿಸಬಾರದು - ಜ ಅಸೀಮ್ ಮುನೀರ್, ಪಾಕ್ ಸೇನಾ ಮುಖ್ಯಸ್ಥ
ನೀವು ನಿಜಕ್ಕೂ ಶಕ್ತರಾಗಿದ್ದರೆ, ಇತರರು ನಿಮ್ಮನ್ನು ದುರ್ಬಲರೆಂದು ಭಾವಿಸುತ್ತಾರೆಂಬ ಕೀಳರಿಮೆ ನಿಮಗೇಕೆ?

ರಾಜ್ಯದಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದು ನಮಗೆ ಗೊತ್ತಿದೆ. ಈ ಬಗ್ಗೆ ಚರ್ಚೆ ಅನಗತ್ಯ -ಯಡಿಯೂರಪ್ಪ, ಮಾಜಿ ಸಿಎಂ
ಆಯ್ಕೆಯನ್ನು ನಿಮಗೆ ಬಿಟ್ಟರೆ ನೀವು ನಿಮಗೆ ಅತ್ಯಧಿಕ ಗೊತ್ತಿದ್ದವರಿಗೆ ಪಟ್ಟಾಭಿಷೇಕ ಮಾಡಿಬಿಡುತ್ತೀರಿ ಎಂಬುದೇ ನಿಮ್ಮ ಪಕ್ಷದೊಳಗಿನ ಎಲ್ಲರ, ಎಲ್ಲ ಆತಂಕಗಳಿಗೆ ಮೂಲ ಕಾರಣ.

ನನಗೆ ಅತ್ತೂ ಕರೆದು ಡ್ರಾಮಾ ಮಾಡಿ ಅಭ್ಯಾಸ ಇಲ್ಲ - ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ಕೆಲವು ದಿನಗಳ ಮಟ್ಟಿಗೆ ಮೋದೀಜಿಯಂತಹ ಪ್ರತಿಭಾವಂತರ ಸಹವಾಸದಲ್ಲಿದ್ದರೆ ಅಭ್ಯಾಸವಾಗಿ ಬಿಡುತ್ತದೆ ಬಿಡಿ.

ಪ್ರಧಾನಿ ಮೋದಿ ದೇಶದ ಜನರ ತೆರಿಗೆ ಹಣದ ಖಜಾನೆ ಕಾಯುತ್ತಿರುವ ಕಾಳಿಂಗ ಸರ್ಪ - ಡಾ.ಕೆ.ಸುಧಾಕರ್, ಸಚಿವ
ಎಲ್ಲ ಮಾತುಗಳಲ್ಲೂ ಒಂದಷ್ಟು ಸತ್ಯ ಇರುತ್ತದೆ ಅಂತಾರೆ. ಅವರು ಕಾಳಿಂಗ ಸರ್ಪ ಎನ್ನುವ ಮಾತಿನಲ್ಲಿ ಬಹಳಷ್ಟು ಸತ್ಯವಿದೆ.

ಬಿಜೆಪಿಯಲ್ಲಿ ಅಂತಿಮವಾಗಿ ಪ್ರಧಾನಿ ಮೋದಿ ಸಹಿ ಹಾಕಿದ ಮೇಲೆಯೇ ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗುತ್ತದೆ - ಅಣ್ಣಾ ಮಲೈ, ಕರ್ನಾಟಕ ಬಿಜೆಪಿ ಸಹ ಉಸ್ತುವಾರಿ
ಆ ದೃಷ್ಟಿಯಿಂದ ಒಂದೊಂದು ಸೀಟಿಗೆ ಅಷ್ಟು ದುಬಾರಿ ಬೆಲೆ ನಿಗದಿಮಾಡಿರುವುದರಲ್ಲಿ ಅಚ್ಚರಿ ಇಲ್ಲ.

ಸಬ್‌ಕಾ ಸಾಥ್, ಸಬ್ ಕಾ ವಿಕಾಸ್‌ಗೆ ಬಸವಣ್ಣನವರ ಆಶಯವೇ ಪ್ರೇರಣೆ - ನರೇಂದ್ರ ಮೋದಿ, ಪ್ರಧಾನಿ
ವಿಜಯಕಾಲದಲ್ಲಿ ಶಂಕರಾಚಾರ್ಯರ ನಾಮ ಜಪಿಸುತ್ತಿದ್ದವರು ಹಠಾತ್ತನೆ ಬಸವಣ್ಣನವರನ್ನು ನೆನಪಿಸುತ್ತಿರುವುದು ಯಾವುದಾದರೂ ವಿನಾಶದ ಮುನ್ಸೂಚನೆ ಅಲ್ಲತಾನೇ?

ಆಕಾಶದಲ್ಲಿ ಹದ್ದು ಹಾರುತ್ತಿದ್ದರೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ‘ನೋಡಿ, ಕೋಣ ಹಾರುತ್ತಿದೆ’ ಎನ್ನುತ್ತಾರೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಅವರೆಲ್ಲಾ ಇನ್ನೂ ತುಂಬಾ ಎತ್ತರದಲ್ಲಿ ಹಾರಾಡುತ್ತಿರುವುದರಿಂದ, ಪಾಪ, ದೂರದಿಂದ ಅವರಿಗೆ ಹಾಗೆ ಕಾಣುತ್ತಿರಬಹುದು.

ಬಿಜೆಪಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಭ್ರಷ್ಟರನ್ನು ಬಿಡುವುದೂ ಇಲ್ಲ - ರಾಜನಾಥ ಸಿಂಗ್, ಕೆಂದ್ರ ಸಚಿವ
ದೇಶವಾಸಿಗಳು ಪದೇಪದೇ ಕಂಡಿರುವಂತೆ, ಆ ಪಕ್ಷ ಭ್ರಷ್ಟಾಚಾರವನ್ನು ಪೋಷಿಸುತ್ತದೆ ಮತ್ತು ಗಲ್ಲಿಗೇರಬೇಕಾದ ಭ್ರಷ್ಟರನ್ನು ದೊಡ್ಡ ದೊಡ್ಡ ಹುದ್ದೆಗಳಿಗೇರಿಸುತ್ತದೆ.

ಕಾಂಗ್ರೆಸ್ ಪಕ್ಷ ಸರ್ಕಸ್ ಕಂಪೆನಿ ಇದ್ದಂತೆ ಅಲ್ಲಿ ಜೋಕರ್ ಗಳು ಹೆಚ್ಚಾಗಿದ್ದಾರೆ - ಶ್ರೀರಾಮುಲು, ಸಚಿವ
ಇಂತಹ ಮಾತನ್ನು ಹೀರೋಗಳು ಹೇಳಿದರೆ ಕೇಳಬಹುದಿತ್ತು, ಮಹಾ ಜೋಕರ್ ಗಳೇ ಹೇಳಿದರೆ ಹೇಗೆ?

ಬಿಜೆಪಿ ಚುನಾವಣಾ ಪ್ರಣಾಳಿಕೆ ಓದುವುದೂ, ಸತ್ತ ಮಗನ ಜಾತಕ ಓದುವುದೂ ಎರಡೂ ಒಂದೇ - ಕಾಂಗ್ರೆಸ್
ಪ್ರಣಾಳಿಕೆಯ ವಿಷಯದಲ್ಲಿ ನಿಮ್ಮದೂ ತುಂಬಾ ಭಿನ್ನವೇನಲ್ಲ.

ಪ್ರಧಾನಿ ಮೋದಿಯವರು ತಮ್ಮ ಬಗ್ಗೆ ತಾವೇ ಮಾತನಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ತಮ್ಮ ಬಗ್ಗೆ ಅವರು ಕೇವಲ ಸತ್ಯ ಹೇಳಿದರೂ ಸಾಕು, ಸಹಿಸಿಕೊಳ್ಳಬಹುದು.

ಕರ್ನಾಟಕದ ಜನತೆ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪರನ್ನು ನೋಡಿಕೊಂಡು ಮತ ನೀಡಬೇಕು - ಅಮಿತ್ ಶಾ, ಕೆಂದ್ರ ಸಚಿವ
ಸಿದ್ಧಾಂತಗಳ ಬಗ್ಗೆ ಬೊಗಳೆ ಬಿಡುತ್ತಿದ್ದವರಿಗೆ, ಈರೀತಿ ವ್ಯಕ್ತಿಗಳ ಮುಖ ನೋಡಿ ಓಟುಕೊಡಿ ಎಂದು ಅಂಗಲಾಚುವ ದುಸ್ಥಿತಿ ಬರಬಾರದಿತ್ತು.

ಅನುಭವದ ಆಧಾರದಲ್ಲಿ ಜನರಿಂದ ಜನರಿಗೋಸ್ಕರ ರೂಪುಗೊಂಡ ಪ್ರಣಾಳಿಕೆ ನಮ್ಮದು - ಬಸವರಾಜ ಬೊಮ್ಮಾಯಿ, ಸಿಎಂ
ನೀವು ನಿಮ್ಮ ಪಕ್ಷದ ಯಾವುದೇ ಪ್ರಣಾಳಿಕೆ ಓದಿ ಎಷ್ಟು ದಶಕಗಳಾದವು ಸಾರ್?

ಹೆಣ್ಣು ಮಕ್ಕಳ ದೇಹ ಅತ್ಯಮೂಲ್ಯ, ಹೀಗಾಗಿ ಅವರು ಮೈತುಂಬ ಬಟ್ಟೆ ಧರಿಸುವುದು ಸೂಕ್ತ - ಸಲ್ಮಾನ್ ಖಾನ್, ನಟ
ಹೆಣ್ಣುಮಕ್ಕಳನ್ನು ಅಶ್ಲೀಲವಾಗಿ ಚಿತ್ರಿಸುವ ಯಾವುದೇ ಸಿನೆಮಾದಲ್ಲಿ ನಾವು ನಟಿಸುವುದಿಲ್ಲ ಎಂದು ನಿಮ್ಮಂತಹ ಮೇರು ನಟರು ಘೋಷಿಸಿಬಿಟ್ಟರೆ, ಬದಲಾವಣೆ ಖಚಿತ.

ಜನರು ಪ್ರಧಾನಿಯ ‘ಮನ್ ಕಿ ಬಾತ್’ ಕೇಳುತ್ತಾರೆ ಆದರೆ ಪ್ರಧಾನಿ ಜನರ ಮಾತು ಕೇಳುವುದು ಯಾವಾಗ? - ಭಗವಂತ ಸಿಂಗ್ ಮಾನ್, ಪಂಜಾಬ್ ಸಿಎಂ
ಪ್ರಧಾನಿಯು ಜನರ ಮಾತನ್ನು ಕೇಳಿದ ದಿನ, ಅವರ ಬಂಡವಾಳಶಾಹಿ ಧಣಿಗಳು ಅವರನ್ನು ಒದ್ದೋಡಿಸುವುದಿಲ್ಲವೇ?

ಜಗತ್ತಿನ ಬಹು ಪಾಲು ದೇಶಗಳು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಭಾರತದ ಕಡೆ ಮುಖ ಮಾಡುತ್ತಿವೆ - ಡಿ.ವಿ. ಸದಾನಂದ ಗೌಡ, ಮಾಜಿ ಸಿಎಂ
ಯಾವ ರೀತಿಯ ಪರಿಹಾರಗಳನ್ನು ಪ್ರಯೋಗಿಸಬಾರದು ಎಂಬುದನ್ನು ಕಲಿಯುವುದಕ್ಕಿರಬಹುದೇ?

ನನಗೆ ರಾಜಕೀಯ ಗೊತ್ತಿಲ್ಲ. ಹೀಗಾಗಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿಲ್ಲ - ಶಿವರಾಜ್ ಕುಮಾರ್, ನಟ
ಗೊತ್ತಿದ್ದರೆ ಇನ್ನೂ ದೂರ ಓಡಿ ಬಿಡುತ್ತಿದ್ದಿರಿ.

ಪದವೀಧರರ ಸಂಖ್ಯೆ ಹೆಚ್ಚಳವೇ ನಿರುದ್ಯೋಗಕ್ಕೆ ಕಾರಣ - ಶೋಭಾ ಕರಂದ್ಲಾಜೆ, ಸಚಿವೆ
ವಿಶೇಷವಾಗಿ ನಕಲಿ ಪದವೀಧರರಿಂದಾಗಿ ಹಲವು ಕಠಿಣ ಸಮಸ್ಯೆಗಳು ಎದುರಾಗಿವೆ.

ಮತದಾರರ ಮನವೊಲಿಸುವುದು ಹೇಗೆ ಎಂಬುದು ನಮಗೆ ಗೊತ್ತಿದೆ- ಬಿ.ಎಲ್. ಸಂತೋಷ್, ಬಿಜೆಪಿ ಮುಖಂಡ
ಸದ್ಯಕ್ಕೆ ಬಿಜೆಪಿ ಭಿನ್ನ ಮತೀಯರ ಮನ ವೊಲಿಸುವುದೇ ಕಷ್ಟದ ವಿಷಯವಾಗಿ ಬಿಟ್ಟಿದೆ. ನಾನು ಯಾವಾಗ ಬಾಯಿಗೆ ಬಂದಂತೆ ಮಾತನಾಡಿದ್ದೇನೆ.

ನಾನು ಒಂದು ತಪ್ಪು ಮಾತನಾಡಿದ್ದರೆ ತೋರಿಸಿ - ಈಶ್ವರಪ್ಪ, ಶಾಸಕ
ಯಾವಾಗ ಸರಿ ಮಾತಾಡಿದ್ದೀರಿ ಎನ್ನುವುದನ್ನು ನೀವೇ ಹೇಳಿ ಬಿಡಿ.

ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಮೋಸ ನಾನು ಇನ್ನೂ ಮರೆತಿಲ್ಲ - ವಿ.ಶ್ರೀನಿವಾಸ ಪ್ರಸಾದ್, ಸಂಸದ
ದಲಿತರಿಗೆ ಆರೆಸ್ಸೆಸ್ ಮಾಡುತ್ತಿರುವ ಮೋಸ ನಿಮಗೆ ಸಹ್ಯವೇ ?

ಕರ್ನಾಟಕದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದರೆ ಕೇವಲ ನಾಯಕರಿಗಷ್ಟೇ ಲಾಭ, ಜನರಿಗೆ ನಷ್ಟ - ಬಿ.ಕೆ.ಹರಿಪ್ರಸಾದ್, ವಿ.ಪ.ವಿರೋಧ ಪಕ್ಷದ ನಾಯಕ
ತಮ್ಮ ಪಕ್ಷದಲ್ಲಿ ಮಾರಾಟಕ್ಕಿರುವ ಶಾಸಕರಿರುವವರೆಗೆ ಮೈತ್ರಿ ಸರಕಾರದ ಪ್ರಶ್ನೆ ಬರುವುದಿಲ್ಲ ಬಿಡಿ.

ನನ್ನನ್ನು ಸೋಲಿಸಲು ಇದು ಗುಜರಾತ್ ಅಲ್ಲ - ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಒಂದು ಕಾಲದಲ್ಲಿ ನೀವು ಗುಜರಾತ್ ಮಾದರಿ ಮೇಲೆ ನಂಬಿಕೆ ಇಟ್ಟವರಲ್ಲವೇ

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!