ಮಹಿಳಾ ಮತದಾರರಲ್ಲಿ ಅರಿವು ಮೂಡಿಸುವ ಪಿಂಕಥಾನ್ ಕಾರ್ಯಕ್ರಮ

Update: 2023-05-08 18:49 GMT

ಬೆಂಗಳೂರು, ಮೇ 8: ಮಹಿಳೆಯರು ಮತಗಟ್ಟೆಗೆ ಬಂದು ಮತದಾನವನ್ನು ಮಾಡಲು ಪ್ರತಿ ಕ್ಷೇತ್ರಗಳಲ್ಲಿಯೂ 5 ಪಿಂಕ್ ಬೂತ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಪಿಂಕ್ ಬೂತ್‍ಗಳಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿಗಳೇ ಕಾರ್ಯನಿರ್ವಹಿಸಲಿದ್ದಾರೆ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಸಿದ್ದಾರೆ.

ಸೋಮವಾರ ನಗರದ ಪುರಭವನದಲ್ಲಿ ಮಹಿಳಾ ಮತದಾರರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ‘ಪಿಂಕಥಾನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಬಂದು ನಮ್ಮ ಸಂವಿಧಾನ ನೀಡಿರುವಂತಹ ಮತದಾನದ ಅಧಿಕಾರವನ್ನು ಚಲಾಯಿಸುವುದರ ಜೊತೆಗೆ ಎಲ್ಲರಲ್ಲೂ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮಾತನಾಡಿ, ನಗರದಲ್ಲಿ ಈಗಾಗಲೇ ಎಲ್ಲರಿಗೂ ಮತದಾರರ ಗುರುತಿನ ಚೀಟಿ ವಿತರಣೆ ಮಾಡಿದ್ದು, ಅದರಲ್ಲಿ ಎಲ್ಲ ಮಾಹಿತಿಯೂ ಲಭ್ಯವಿರಲಿದೆ. ಇದರಿಂದ ಸುಲಭವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬಹುದಾಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಮತದಾನದ ದಿನ ವೇತನಸಹಿತ ರೆಜೆಯಿರಲಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ನಗರದಲ್ಲಿ ಪಿಂಕ್ ಮತಗಟ್ಟೆಗಳು ಮಾತ್ರವಲ್ಲದೆ ವಿವಿಧ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಮಾಡಲಾಗುತ್ತಿದ್ದು, ಅದರಂತೆ ಅಂಗವಿಕಲರ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ತಂತ್ರಜ್ಞಾನ ಮತಗಟ್ಟೆ, ಪರಿಸರ(ಹಸಿರು ಬಣ್ಣದ) ಮತಗಟ್ಟೆ, ಸೈನಿಕ ಮತಗಟ್ಟೆ, ಕ್ರೀಡಾ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಂಸ್ಕøತಿ ಮತಗಟ್ಟೆ, ಸೈನಿಕರ ವಿಶೇಷ ಮತಗಟ್ಟೆಗಳಿರಲಿವೆ ಎಂದರು.

ಮತದಾನದ ದಿನ ಮುಂಜಾಗ್ರತಾ ಕ್ರಮವಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್‍ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದಾದರು ಮತಗಟ್ಟೆಗಳ ಬಳಿ ತುರ್ತು ಸಂಧರ್ಭ ಬಂದಲ್ಲಿ, ಆಂಬುಲೆನ್ಸ್ ಮೂಲಕ ವೈದ್ಯರ ಸೇವೆ ಒದಗಿಸಲಾಗುವುದು ಎಂದು ಅವರು ಹೇಳಿದರು.

ವಿವಿಧ ರಂಗದ ಪ್ರತಿನಿಧಿಗಳು ಭಾಗಿ: ಪಿಂಕಥಾನ್ ಕಾರ್ಯಕ್ರಮದಲ್ಲಿ ವಿಶೇಷ ಚೇತನರು, ವೈದ್ಯರು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಸ್ವಸಹಾಯ ಸಂಘದ ಗುಂಪುಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಬೀದಿ ಬದಿ ವ್ಯಾಪಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರತಿಜ್ಞೆ ವಿಧಿ ಬೋಧನೆ: ವಿವಿಧ ರಂಗಗಳ ಮಹಿಳಾ ಪ್ರತಿನಿಧಿಗಳು ಪಿಂಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡುವ ಪ್ರತಿಜ್ಞೆ ವಿಧಿಯನ್ನು ಸ್ವೀಕರಿಸಿದರು.

ವೋಟ್-ಎ-ಥಾನ್ ವಿಜೇತರಿಗೆ ಪ್ರಶಸ್ತಿ ವಿತರಣೆ: ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಆಯೋಜಿಸಿದ್ದ ವೋಟ್-ಎ-ಥಾನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ವಿತರಿಸಲಾಯಿತು. 

ಪೋಸ್ಟರ್, ರೀಲ್ಸ್, ಸ್ಲೋಗನ್‍ನಲ್ಲಿ ಪ್ರಥಮ ಬಂದವರಿಗೆ 5 ಸಾವಿರ ರೂ. ನಗದು ಜೊತೆಗೆ ಸ್ಮರಣಿಕೆ, ದ್ವಿತೀಯ ಬಂದವರಿಗೆ 3 ಸಾವಿರ ರೂ. ನಗದು ಬಹುಮಾನದ ಜೊತೆಗೆ ಸ್ಮರಣಿಕೆಯನ್ನು ವಿತರಿಸಲಾಯಿತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸಂಗಪ್ಪ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Similar News