ಯಲಹಂಕ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಢಿಕ್ಕಿ: ನಿರ್ವಾಹಕ ಸ್ಥಳದಲ್ಲೇ ಮೃತ್ಯು

Update: 2023-05-09 16:25 GMT

ಬೆಂಗಳೂರು, ಮೇ 9: ಬಿಎಂಟಿಸಿ ಬಸ್ ಗುದ್ದಿದ ಪರಿಣಾಮ ನಿರ್ವಾಹಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲಹಂಕ ನಾಲ್ಕನೇ ಹಂತದ ಬಸ್ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. 

ಮೃತರನ್ನು ಬಸ್ ನಿರ್ವಾಹಕ ಸೋಮಪ್ಪ ಎಂದು ಗುರುತಿಸಲಾಗಿದೆ. ಇದೇ ವೇಳೆ ಬಸ್ ಗೋಡೆಗೆ ಗುದ್ದಿದ್ದು, ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ನಿಲ್ದಾಣದಲ್ಲಿದ್ದಾಗ ಬಸ್ ನಿರ್ವಾಹಕ ಸೋಮಪ್ಪ, ಟಿಕೆಟ್ ಹಣ ಸಂಗ್ರಹದ ಲೆಕ್ಕ ನೀಡಿ ವಾಪಸ್ ಬಸ್ ಬಳಿಗೆ ಬರುತ್ತಿದ್ದರು. 

ಈ ಸಂದರ್ಭದಲ್ಲಿ ಬಸ್ ಚಾಲನೆಯಲ್ಲಿತ್ತು. ಆಗ ಚಾಲಕ ಬ್ರೇಕ್ ಒತ್ತುವ ಬದಲು ಕ್ಲಚ್ ಒತ್ತಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಬಸ್ ಮುಂದಕ್ಕೆ ಚಲಿಸಿದೆ. ಇದರ ಪರಿಣಾಮ ಮುಂದೆ ಬರುತ್ತಿದ್ದ ಸೋಮಪ್ಪನ ಮೇಲೆ ಬಸ್ ಹರಿದಿದೆ. ಅಪಘಾತದ ರಭಸಕ್ಕೆ ಮುಂದಿದ್ದ ಗೋಡೆ ಮಧ್ಯೆ ಸೋಮಪ್ಪ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚಾಲಕ ಘಟನೆ ಬಳಿಕ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಾಳು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Similar News