ಸ್ಯಾಂಡಲ್‍ವುಡ್ ನಟ-ನಟಿಯರಿಂದ ಮತ ಚಲಾವಣೆ
ಬೆಂಗಳೂರು, ಮೇ 10: ರಾಜ್ಯ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಬುಧವಾರ ಬಿರುಸಿನ ಮತದಾನ ನಡೆಯಿತು. ಹೆಚ್ಚಿನ ಸಂಖ್ಯೆಯ ಸ್ಯಾಂಡಲ್‍ವುಡ್ ನಟ-ನಟಿಯರೂ ತಮ್ಮ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಅಲ್ಲದೆ, ತಮ್ಮ ಹಕ್ಕು ಚಲಾಯಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬ್ಯಾಟರಾಯನಪುರದಲ್ಲಿ ನಟ ಶಿವರಾಜ್‍ಕುಮಾರ್ ದಂಪತಿ ತಮ್ಮ ಮತ ಚಲಾಯಿಸಿದರೆ, ಪದ್ಮನಾಭನಗರದಲ್ಲಿ ರಮೇಶ್ ಅರವಿಂದ್ ತಮ್ಮ ಪತ್ನಿ ಜತೆ ಆಗಮಿಸಿ ಮತ ಚಲಾಯಿಸಿದರು. ಶಾಂತಿನಗರದಲ್ಲಿ ನಟ ಪ್ರಕಾಶ್ ರೈ ಮತ ಚಲಾಯಿಸಿದರೆ, ನಟ ಹಾಗೂ ರಾಜ್ಯಸಭಾ ಸದಸ್ಯ ಜಗೇಶ್ ಮಲ್ಲೇಶ್ವರಂನ ಮತಗಟ್ಟೆಗೆ ಆಗಮಿಸಿ ಪತ್ನಿ ಪರಿಮಳ ಅವರೊಂದಿಗೆ ಮತ ಚಲಾವಣೆ ಮಾಡಿದರು.
ಹೊಸಕೆರೆಹಳ್ಳಿಯಲ್ಲಿ ನಟ ಯಶ್ ಮತದಾನ ಮಾಡಿದರೆ, ಕತ್ರಿಗುಪ್ಪೆಯಲ್ಲಿ ನಟ ಉಪೇಂದ್ರ ತಮ್ಮ ಪತ್ನಿ ಪ್ರಿಯಾಂಕಾ ಜತೆ ಆಗಮಿಸಿ ಮತದಾನ ಮಾಡಿದರು. ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ನೆಲಮಂಗಲದಲ್ಲಿ ಮತದಾನ ಮಾಡಿದರೆ, ವಿಜಯನಗರದಲ್ಲಿ ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತಾ ದಂಪತಿ ಮತದಾನ ಮಾಡಿದ್ದಾರೆ.
ಸದಾಶಿವನಗರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮತ ಚಲಾಯಿಸಿದರು. ನಾಗರಭಾವಿಯಲ್ಲಿ ಪತ್ನಿ ಜ್ಯೋತಿ ಜತೆ ಆಗಮಿಸಿ ನೆನಪಿರಲಿ ಪ್ರೇಮ್ ಮತದಾನ ಮಾಡಿದರು. ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿ ಮಾಳವಿಕಾ ಅವಿನಾಶ್ ಮತಚಲಾಯಿಸಿದರು.
ನಟರಾದ ದುನಿಯಾ ವಿಜಯ್, ಗಣೇಶ್, ಲೂಸ್‍ಮಾದ ಯೋಗಿ, ಶ್ರೀಮುರಳಿ, ಸಾಧುಕೋಕಿಲ, ನಟಿಯರಾದ ಸಂಜನಾ, ಹರ್ಷಿಕಾ ಪೂಣಚ್ಚ, ಅಮೂಲ್ಯ ಸೇರಿದಂತೆ ಸಾಕಷ್ಟು ಕಲಾವಿದರು ವೋಟ್ ಮಾಡಿದರು.
‘ನನ್ನ ಪ್ರೀತಿಯ ಕನ್ನಡಿಗರೆ.. ನಾನು ಮತೀಯ ರಾಜಕಾರಣದ ವಿರುದ್ಧ.. ಶೇ.40 ಭ್ರಷ್ಟಾಚಾರಿಗಳ ವಿರುದ್ಧ ನನ್ನ ಮತ ಚಲಾಯಿಸಿದ್ದೇನೆ.. ನೀವು ನಿಮ್ಮ ಮನಃಸಾಕ್ಷಿಯಿಂದ.. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಲು ನಿಮ್ಮ ಮತವನ್ನು ಚಲಾಯಿಸಿ’
-ಪ್ರಕಾಶ್ ರಾಜ್ ಹಿರಿಯ ನಟ