ರಾಜ್ಯದಲ್ಲಿ 4 ವರ್ಷಗಳಿಂದ ಹಿಡಿದಿದ್ದ ಗ್ರಹಣ ಬಿಟ್ಟಿದೆ: ಡಿ.ಕೆ.ಶಿವಕುಮಾರ್
ಬೆಂಗಳೂರು, ಮೇ 13: ಕಾಂಗ್ರೆಸ್‍ನ ಈ ಗೆಲುವು ರಾಜ್ಯದ ಎಲ್ಲಾ ಜನರ ಗೆಲುವಾಗಿದೆ. ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಹಿಡಿದಿದ್ದ ಗ್ರಹಣ ಬಿಟ್ಟಿದ್ದು, ಜನರ ಕಣ್ಣೀರು ಒರೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಮುಖದಲ್ಲಿ ನಗು ಅರಳುತ್ತಿದೆ. ರಾಜ್ಯಕ್ಕೆ ಅಂಟಿದ್ದ ಗ್ರಹಣ ಬಿಡಿಸಿದ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಚುನಾವಣೆ ಭಾರತ ಜೋಡೋ ಚುನಾವಣೆಯಾಗಿದ್ದು, ಫಲಿತಾಂಶ ಬಂದಿದೆ. ನಮಗೆ ಮಾರ್ಗದರ್ಶನ ನೀಡಿದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸುರ್ಜೆವಾಲ, ವೇಣುಗೋಪಾಲ್ ಹಾಗೂ ರಾಜ್ಯದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ಇದು ಭ್ರಷ್ಟಾಚಾರ ವಿರುದ್ಧದ ಗೆಲುವು. 40ಪರ್ಸೆಂಟ್ ಕಮಿಷನ್, ಬೆಲೆ ಏರಿಕೆ, ರೈತರ ಸಂಕಷ್ಟಗಳ ವಿರುದ್ಧ, ಗೃಹಿಣಿಯರ ಕಣ್ಣೀರಿನ ವಿರುದ್ಧ, ಯುವ ಸಮುದಾಯದ ನಿರುದ್ಯೋಗ ಸಮಸ್ಯೆ ವಿರುದ್ಧದ ಗೆಲುವು. ಕಾಂಗ್ರೆಸ್ ಗ್ಯಾರಂಟಿಗಳ ಪರ ಗೆಲುವು. ಇನ್ನು ಮುಂದೆ ಗೃಹಜ್ಯೋತಿ ಬೆಳಗಲಿದೆ. ಸರಕಾರ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದು ಶಿವಕುಮಾರ್ ಹೇಳಿದರು.
ಯುವನಿಧಿಯು ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲಿದೆ. ಅನ್ನಭಾಗ್ಯ ಬಡವರ ಹೊಟ್ಟೆ ತುಂಬಿಸಲಿದೆ. ಮಹಿಳೆಯರು ಸುಖವಾಗಿ ಬಸ್ ಪ್ರಯಾಣ ಮಾಡಲಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ನೆಮ್ಮದಿಯ ಉಸಿರು ಬಿಡಲಿದ್ದಾರೆ. ಕೊಟ್ಟ ಮಾತಿನಂತೆ ಈ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.