ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ನಿಧನ

Update: 2023-05-19 17:50 GMT

ಬೆಂಗಳೂರು, ಮೇ 19: ನಾರಾಯಣ ನೇತ್ರಾಲಯದ ಮುಖ್ಯಸ್ಥರೂ ಆಗಿರುವ ಖ್ಯಾತ ನೇತ್ರ ತಜ್ಞ ಡಾ ಕೆ ಭುಜಂಗ ಶೆಟ್ಟಿ(69) ಅವರು ಶುಕ್ರವಾರ ನಿಧನ ಹೊಂದಿದ್ದಾರೆ.

ಇಂದು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ನೀಡಿದ್ದ ಡಾ.ಭುಜಂಗ ಶೆಟ್ಟಿ ಅವರಿಗೆ ಸಂಜೆ 6 ಗಂಟೆ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದೆ.

ಆನಂತರ ಆಸ್ಪತ್ರೆಯಿಂದ ಮನೆಗೆ ವಾಪಸಾದ ಬಳಿಕ ಹೃದಯಾಘಾತವಾಗಿದ್ದು, ಕೂಡಲೇ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಡಾ.ಕೆ.ಭುಜಂಗಶೆಟ್ಟಿ ಅವರು, ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, 1978ರಲ್ಲಿ ಎಂಬಿಬಿಎಸ್ ಮಾಡಿದರು. ಅವರು 1982ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ನೇತ್ರ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ರೆಸಿಡೆನ್ಸಿ ಮಾಡಿದರು.

ಆನಂತರ, ಎಂಬತ್ತರ ದಶಕದಲ್ಲಿ ಒಂದು ಸಣ್ಣ ಚಿಕಿತ್ಸಾಲಯದಲ್ಲಿ ನೇತ್ರಶಾಸ್ತ್ರ ಅಭ್ಯಾಸವನ್ನು ಪ್ರಾರಂಭಿಸಿದರು.ಬಳಿಕ ನಾರಾಯಣ ನೇತ್ರಾಲಯದಲ್ಲಿ ವಿವಿಧ ಉಪ ವಿಶೇಷತೆಗಳ ಅಭಿವೃದ್ಧಿಗೆ ಅವರು ಸಕ್ರಿಯವಾಗಿ ಪ್ರೋತ್ಸಾಹಿಸಿದ್ದಾರೆ.

ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಅವರು ಒಬ್ಬ ನಿಪುಣ ಕಣ್ಣಿನ ಪೊರೆ ಮತ್ತು ಫಾಕೋಇಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. ಸದ್ಯ ಅವರು ನಾರಾಯಣ ನೇತ್ರಾಲಯದ ಅಧ್ಯಕ್ಷರಾಗಿದ್ದರು.

Similar News