ಸಿದ್ದರಾಮಯ್ಯ, ಡಿಕೆಶಿ​ ಜತೆಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 8 ಮಂದಿ ಶಾಸಕರು

Update: 2023-05-20 08:06 GMT

ಬೆಂಗಳೂರು: ಸಂಪುಟ ದರ್ಜೆ ಸಚಿವರಾಗಿ 8 ಮಂದಿ ಹಿರಿಯ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. 

ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಮಂತ್ರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 

ಡಾ.ಜಿ. ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ,ಕೆ.ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಝಮೀರ್ ಅಹಮದ್ ಖಾನ್ ಪ್ರಮಾಣ ವಚನ ಸ್ವೀಕರಿಸಿದರು. 

ಡಾ ಜಿ ಪರಮೇಶ್ವರ್ ಅವರು ಭಾರತದ ಸಂವಿಧಾನದ ಹೆಸರಿನಲ್ಲಿ, ಸತೀಶ್ ಜಾರಕಿಹೊಳಿ ಅವರು ಬುದ್ಧ, ಬಸವ ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ, ‌ಹಾಗೂ ಉಳಿದ ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 

ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಗಣ್ಯರಿಗೂ ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. 

ಪ್ರಮಾಣ ವಚನ ಸಮಾರಂಭ ಮುಕ್ತಾಯವಾಗುತ್ತಿದಂತೆ ಗುಂಪು ಛಾಯಾಗ್ರಹಣ ( ಗ್ರೂಪ್ ಫೋಟೋ ) ಅವಕಾಶ ಮಾಡಿಕೊಡಲಾಗಿತ್ತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು. 

ಪ್ರಮಾಣ ವಚನ ಸ್ವೀಕರಿಸಿದ ಗಣ್ಯರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಒಳಗೊಂಡಂತೆ ಸಾರ್ವಜನಿಕರು ಈ ಸಮಾರಂಭದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Similar News