ಬ್ಯಾಟರಾಯನಪುರ ಬಿಜೆಪಿ ನಾಯಕರಿಗೆ ದೇಶದ್ರೋಹಿಗಳು ಎಂದ ಕಾರ್ಯಕರ್ತೆ!

ವೀಡಿಯೊ ವೈರಲ್

Update: 2023-05-20 19:34 GMT

ಬೆಂಗಳೂರು: ನಗರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಚಿಂತನ ಮಂಥನ ಸಭೆಯಲ್ಲಿ ಪಕ್ಷ ನಾಯಕರ ವಿರುದ್ಧವೇ ಕಾರ್ಯಕರ್ತೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾದ ಘಟನೆ ವರದಿಯಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. 

ಸಭೆಯ ವೇದಿಕೆ ಮೇಲಿದ್ದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆನ್ನಲಾದ ಸ್ಥಳೀಯ ಕಾರ್ಯಕರ್ತೆಯೊಬ್ಬರು, ''ಪಕ್ಷದ ಸೋಲಿಗೆ ನೀವೇ ಕಾರಣ, ನೀವು ಭಾರತೀಯರಾ? ಅಥವಾ ಪಾಕಿಸ್ತಾನಿಗಳಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿರುವ ನೀವು ದೇಶದ್ರೋಹಿಗಳು'' ಎಂದು ಕಿಡಿಕಾರಿದ್ದಾರೆ. 

'ನಾವು ಹಲವಾರು ದಿನಗಳಿಂದ ನಿದ್ದೆ ಮಾಡದೇ ಪಕ್ಷಕ್ಕಾಗಿ ದುಡಿಯುತ್ತಿದ್ದರೆ, ನೀವು ಮಾತ್ರ ಜಾತಿ ಅಂತ ಹೇಳಿ ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದೀರಿ' ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ವೇದಿಕೆಯಲ್ಲಿ ಯಾರ್ಯಾರು ಕುಳಿತಿದ್ದರೆಂದು ತಿಳಿದಿಲ್ಲ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ (2023ರ ಚುನಾವಣೆ) ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಕೃಷ್ಣ ಭೈರೇಗೌಡ ಎದುರು ಪರಾಭವಗೊಂಡಿದ್ದಾರೆ. 

Similar News