ಕಾಲ ಮಿತಿಯಲ್ಲಿ ಕೆಲಸ ಮಾಡಿ ಜನರ ನಿರೀಕ್ಷೆ ಈಡೇರಿಸಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮೇ 23: ನಾಡಿನ ಜನತೆ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಕಾಲ ಮಿತಿಯಲ್ಲಿ ಕೆಲಸ ಮಾಡಿ ಜನರ ನಿರೀಕ್ಷೆ ಈಡೇರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ನನ್ನ ರಾಜಕೀಯ ಜೀವನದಲ್ಲಿ ತಪ್ಪಿಲ್ಲದೆ ಯಾವುದೇ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿಲ್ಲ. ನಿಮ್ಮ ತಪ್ಪಿನಿಂದ ಸರಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸಹಿಸಲ್ಲ. ಜನರ ಆಶೋತ್ತರಗಳನ್ನು ಈಡೇರಿಸಲು, ಉತ್ತಮ ಆಡಳಿತ ನೀಡಲು ಅಧಿಕಾರಿಗಳು ಕೈಜೋಡಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೆ ಪ್ರಭುಗಳು. ಅವರು ನಮ್ಮನ್ನು ಆರಿಸಿ ಕಳುಹಿಸಿದ್ದಾರೆ. ಅವರ ಪ್ರತಿನಿಧಿಗಳಾಗಿ ಇಲ್ಲಿಗೆ ಬಂದಿದ್ದೇವೆ. ಅವರ ಆಶೋತ್ತರಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಜನರ ನಿರೀಕ್ಷೆಗೆ ಅನುಗುಣವಾಗಿ ಎಲ್ಲರೂ ಕೆಲಸ ಮಾಡಬೇಕು. ಸುಭದ್ರ ಸರಕಾರ ಇಲ್ಲದಿದ್ದರೆ ಜನರ ಆಶೋತ್ತರಗಳನ್ನು ಈಡೇರಿಸಲು ಆಗುವುದಿಲ್ಲ ಎಂದು ಅವರು ಹೇಳಿದರು.
ಉತ್ತಮ ಸರಕಾರದ ನಿರೀಕ್ಷೆ, ಕಿರಿಕಿರಿ ಮಾಡದ ಸರಕಾರ, ಚುರುಕಾಗಿರುವ ಸರಕಾರ, ಭಿನ್ನ ಸರಕಾರದ ಅಗತ್ಯವಿದೆ ಎಂದು ಜನ ಬಯಸಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಿಂತುಹೋಗಿದೆ, ಭ್ರಷ್ಟಾಚಾರವಿದೆ ಎಂಬ ಭಾವನೆ ಜನರಲ್ಲಿತ್ತು. ಈ ಭಾವನೆಯನ್ನು ಹೋಗಲಾಡಿಸಲು ಅಧಿಕಾರಿಗಳು ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಗುಣಮಟ್ಟದ ಕಾಮಗಾರಿಗಳಾಗಬೇಕು, ಕಾಲಮಿತಿಯಲ್ಲೆ ಕೆಲಸಗಳಾಗಬೇಕು. ಕಣ್ಣುಮುಚ್ಚಿ ಕೊಂಡು ಸಹಿ ಹಾಕದೆ ಜನರ ಹಣವನ್ನು ಸರಿಯಾದ ರೀತಿಯಲ್ಲಿ ವೆಚ್ಚ ಮಾಡಬೇಕು. ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಇವುಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೇಲ್ವಿಚಾರಣೆ ಮಾಡಬೇಕು. ಕ್ಷೇತ್ರಗಳಿಗೆ ಕಾಲಕಾಲಕ್ಕೆ ಭೇಟಿ ನೀಡುವುದಲ್ಲದೆ ಕಚೇರಿಗಳಿಗೆ ಅನಿರೀಕ್ಷಿತ ಭೇಟಿಯನ್ನೂ ನೀಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಹಿರಿಯ ಅಧಿಕಾರಿಗಳು ನಿಯಮಗಳನ್ನು ಪಾಲಿಸಬೇಕು. ಯೋಜನೆಗಳ ಕ್ಷಿಪ್ರ ಅನುಷ್ಠಾನವಾದರೆ ಜನರಿಗೆ ಪ್ರಯೋಜನವಾಗುತ್ತದೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆನ್ನುವುದು ಸರಕಾರದ ಉದ್ದೇಶ ಎಂದು ಅವರು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಳೆದ ಮೂರುವರೆ ವರ್ಷದ ಡಬಲ್ ಎಂಜಿನ್ ಸರಕಾರದ ಆಳ್ವಿಕೆಯಲ್ಲಿ ಉತ್ತಮ ಆಡಳಿತ ಎಂಬುದು ಮಾಯವಾಗಿ, ಭ್ರಷ್ಟಾಚಾರದ ರಾಜಧಾನಿ ಎಂಬ ಕಳಂಕ ಬಂದಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸಂಪನ್ಮೂಲ, ಪ್ರತಿಭೆ, ಆಳ್ವಿಕೆ ಮಾದರಿ ಆದದ್ದು. ದೇವರಾಜ ಅರಸು, ವೀರೇಂದ್ರ ಪಾಟೀಲರ ಕಾಲದಿಂದ ಸಿದ್ದರಾಮಯ್ಯನವರ ಸರಕಾರದ ಅವಧಿವರೆಗೂ ಕರ್ನಾಟಕದ ಆಡಳಿತ ಯಾರೊಬ್ಬರೂ ಬೆರಳು ತೋರಿಸದಷ್ಟು ಉತ್ತಮವಾಗಿತ್ತು ಎಂದರು.
ರಾಜಕೀಯ ದ್ವೇಷದಿಂದ ನನ್ನ ಮೇಲೆ ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಪ್ರಯೋಗ ಮಾಡಲಾಗಿದೆ. ಚುನಾವಣೆ ಸಮಯದವರೆಗೂ ಈ ಕಾಟ ತಪ್ಪಲಿಲ್ಲ. ಆದರೆ ಜನ ನಮ್ಮ ಪರ ನಿಂತಿದ್ದಾರೆ. ಡಬಲ್ ಇಂಜಿನ್ ಸರಕಾರ ಇದ್ದರೂ, 26 ಬಿಜೆಪಿ ಎಂಪಿಗಳು ಇದ್ದರೂ, ರಾಜ್ಯದವರೆ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದರೂ ನಮಗೆ ಅನ್ಯಾಯವಾಗಿದೆ. ಆಡಳಿತ ವಿಫಲವಾಗಿದೆ. ಕೇಂದ್ರ ಸರಕಾರ ಏನೆಲ್ಲ ಪ್ರಯೋಗ ಮಾಡಿದರೂ ಜನ ನಮ್ಮ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಾವು ಉತ್ತಮ ಆಡಳಿತ, ಸರಕಾರ ನೀಡಲು ಬದ್ಧರಾಗಿದ್ದೇವೆ. ಅದರಲ್ಲಿ ನಿಮ್ಮ ಪಾಲೂ ಇದೆ. ರಾಜ್ಯಕ್ಕೆ ಅಂಟಿರುವ ಕಳಂಕವನ್ನು ತೊಳೆದು ಹಾಕಲು ನೀವು ನಮ್ಮ ಜತೆ ಕೈ ಜೋಡಿಸಬೇಕು. ರಾಜ್ಯದಲ್ಲಿ ಬದಲಾವಣೆ ಕಾಣುವಂತಹ ಆಳ್ವಿಕೆ ನೀಡಬೇಕು ಎಂದು ಅವರು ಹೇಳಿದರು.
ನಿಮ್ಮಿಂದ ಧನಾತ್ಮಕವಾದ ಸಂದೇಶ ತಾಲೂಕು, ಗ್ರಾಮ ಮಟ್ಟದವರೆಗೂ ಹೋಗಬೇಕು. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರಿಗೆ ಪರಿಹಾರ ಕೊಡುವ, ಅವರ ಕುಟುಂಬದವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನು ಅಧಿಕಾರಿಗಳು ತೋರಲಿಲ್ಲ. ಈ ವರ್ತನೆ ಅಕ್ಷಮ್ಯ. ಮಾನವೀಯತೆ ಬಹಳ ಮುಖ್ಯ. ಅದನ್ನು ಇಟ್ಟುಕೊಂಡೇ ಜನರ ಸೇವೆ ಮಾಡಬೇಕು ಎಂದು ಶಿವಕುಮಾರ್ ಹೇಳಿದರು.
ಸಭೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.