ಜಾನಪದ ವಿವಿಯ ನೇಮಕಾತಿಯಲ್ಲಿ ಅಕ್ರಮ ಆರೋಪ: 3 ದಿನಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರ ಆದೇಶ
Update: 2023-05-29 15:46 GMT
ಬೆಂಗಳೂರು, ಮೇ 29: ಜಾನಪದ ವಿಶ್ವ ವಿದ್ಯಾಲಯಕ್ಕೆ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನೀಡಿದ್ದ ನಿರ್ದೇಶಕವನ್ನು ರಾಜ್ಯ ಸರಕಾರ ತಾತ್ಕಾಲಿಕವಾಗಿ ತಡೆಹಿಡಿದಿದ್ದು, ವಿವಿಯ ಅಕ್ರಮಗಳ ಆರೋಪದ ದೂರುಗಳ ಕುರಿತು ಸರಕಾರಕ್ಕೆ ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೋಮವಾರ ಆದೇಶ ಹೊರಡಿಸಲಾಗಿದೆ.
ಜಾನಪದ ವಿವಿಯ ಬೋಧಕ, ಬೋಧಕೇತರ ಖಾಯಂ ನೇಮಕಾತಿಯಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಹಾಗೂ ವಿವಿಯ ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡಿರುವ ಬಗ್ಗೆ ಸರಕಾರಕ್ಕೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ವಿವಿಯು ಅಗತ್ಯ ದಾಖಲಾತಿಗಳೊಂದಿಗೆ ವರದಿ ನೀಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ.ಹಿರೇಮಠ ಆದೇಶವನ್ನು ಹೊರಡಿಸಿದ್ದಾರೆ.