ಬಿಎಸ್ಪಿ ನೂತನ ರಾಜ್ಯಾಧ್ಯಕ್ಷರಾಗಿ ಮಾರಸಂದ್ರ ಮುನಿಯಪ್ಪ ಆಯ್ಕೆ

Update: 2023-06-01 13:40 GMT

ಬೆಂಗಳೂರು, ಜೂ.1: ಮುಂಬರುವ ಲೋಕಸಭಾ ಚುನಾವಣೆ ಹಾಗೂ ಪಕ್ಷ ಸಂಘಟನೆ ಹಿನ್ನೆಲೆ ಹಳೆಯ ಘಟಕ ವಿಸರ್ಜನೆ ಮಾಡಲಾಗಿದ್ದು, ಬಿಎಸ್ಪಿ ರಾಜ್ಯ ಘಟಕದ  ನೂತನ ಅಧ್ಯಕ್ಷರಾಗಿ ಮಾರಸಂದ್ರ ಮುನಿಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯ, ಬಿಎಸ್ಪಿ ರಾಜ್ಯ ಉಸ್ತುವಾರಿ ಡಾ.ಅಶೋಕ್ ಸಿದ್ದಾರ್ಥ್ ಪ್ರಕಟಿಸಿದ್ದಾರೆ.

ಗುರುವಾರ ಇಲ್ಲಿನ ಶಿವಾಜಿನಗರದ ಬಿಎಸ್ಪಿ ಕೇಂದ್ರ ಕಚೇರಿಯಲ್ಲಿ ಬಿಎಸ್ಪಿ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಎಸ್ಪಿ ಪಕ್ಷವೂ ಬಲ ಹೊಂದಿದೆ. ತಳಮಟ್ಟದಲ್ಲಿಯೂ ಪಕ್ಷದ  ಸಂಘಟನೆ, ಸದಸ್ಯತ್ವ ಹೆಚ್ಚಾಗಿ ಇದೆ. ಹೀಗಾಗಿ, ಹೊಸ ಘಟಕ ನೇಮಕ ಮಾಡಿದ್ದು, ರಾಜ್ಯ ಸಂಯೋಜಕರಾಗಿ ಪಕ್ಷದ ಹಿರಿಯ ಮುಖಂಡರಾದ ಎಂ.ಗೋಪಿನಾಥ್, ಎಂ.ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷರಾಗಿ ಗಂಗಾಧರ್ ಬಹುಜನ್, ರಾಜ್ಯ ಖಜಾಂಚಿ ಚಿನ್ನಪ್ಪ ಚಿಕ್ಕಹಾಗಡೆ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಮುನಿಯಪ್ಪ, ಝಾಕೀರ್ ಹುಸೇನ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಮಾರಸಂದ್ರ ಮುನಿಯಪ್ಪ ಅವರು ರಾಜ್ಯ ಸಂಯೋಜಕರಾಗಿ, ಉಸ್ತುವಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಕ್ಷಕ್ಕೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ. ಅಂತವರು ರಾಜ್ಯಾಧ್ಯಕ್ಷರಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಬಿಎಸ್ಪಿ ಪಕ್ಷವೂ ಇನ್ನಷ್ಟು ಬಲಗೊಳ್ಳುವ ವಿಶ್ವಾಸ ನಮ್ಮಲ್ಲಿದೆ ಎಂದ ಅವರು, ಈ ಹಿಂದೆ ಬಿಎಸ್ಪಿಯಿಂದ ದೂರು ಹೋಗಿರುವವರನ್ನು ವಾಪಸ್ಸು ಕರೆತರಲಾಗುವುದು. ಇತರೆ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಮುಖಂಡರಿಗೂ ಒಳ್ಳೆಯ ಸ್ಥಾನಮಾನ ನೀಡಿ, ರಾಜಕೀಯ ಬೆಳವಣಿಗೆಗೆ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.

ಸ್ಪರ್ಧೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷ ಸ್ವತಂತ್ರವಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದೆ. ಅಲ್ಲಿಯವರೆಗೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಿದ್ದು, ಆಡಳಿತರೂಢ ಸರಕಾರಗಳ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದು ಅವರ ತಿಳಿಸಿದರು.

Similar News