ರಾಜ್ಯದ ಆರ್ಥಿಕ ಸ್ಥಿತಿಗತಿಯ ಶ್ವೇತಪತ್ರ ಹೊರಡಿಸಿ ಎಂದ ಸಿ.ಟಿ.ರವಿ
ಬೆಂಗಳೂರು, ಜೂ. 2: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸುವ ಸಂಪುಟದ ನಿರ್ಣಯದ ಜೊತೆಗೆ ಯಾವಾಗದಿಂದ ಅದು ಜಾರಿ ಆಗಲಿದೆ ಎಂದು ತಿಳಿಸಿದ್ದಾರೆ.
ನಮ್ಮ ರಾಜ್ಯದ ಸಂಪನ್ಮೂಲ, ಸಾಲ, ಮೂಲಸೌಕರ್ಯದ ಮೇಲೆ ಹೂಡಿಕೆ ಎಷ್ಟು? ಸಾಲದ ಮೇಲೆ ಕಟ್ಟುವ ಬಡ್ಡಿ ಎಷ್ಟು? ಸಂಬಳ, ನಿವೃತ್ತಿ ವೇತನಕ್ಕೆ ಎಷ್ಟು ಹಣ ವಿನಿಯೋಗ ಆಗುತ್ತಿದೆ? ಎಂದು ಪ್ರಶ್ನಿಸಿದ ಅವರು, ಮೂಲ ಸೌಕರ್ಯದ ಮೇಲೆ ಹೂಡಿಕೆ ಮೂಲಕ ಆದಾಯ ಕ್ರೋಡೀಕರಣ ಸಾಧ್ಯವಿದೆ. ಇಲ್ಲವಾದರೆ ಯೋಜನೆಗಳ ಅನುಷ್ಠಾನ ಸಾಧ್ಯವಿಲ್ಲ ಎಂದು ರವಿ ತಿಳಿಸಿದರು.
ಆರೋಗ್ಯ, ಶಿಕ್ಷಣದಂಥ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಲು ಸಾಧ್ಯವಿಲ್ಲ. ಇದೆಲ್ಲದಕ್ಕೂ ಅನುದಾನ ಮೀಸಲಿಡಲು ಎಷ್ಟು ಹಣ ಬೇಕು? ಅದನ್ನು ಕ್ರೋಡೀಕರಿಸುವುದು ಹೇಗೆ? ಯಾವ ಮೂಲದಿಂದ? ಇದಕ್ಕೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು. ಆಗ ಮಾತ್ರ ಈ ಯೋಜನೆ ತಾತ್ಕಾಲಿಕವೇ? ನಿರಂತರವಾಗಿ ಕೊಡಲು ಸಾಧ್ಯವೇ? ಅಷ್ಟು ಹಣ ನಮ್ಮಲ್ಲಿದೆಯೇ? ಇದೆಲ್ಲವನ್ನೂ ತಿಳಿಯಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಗ್ಯಾರಂಟಿಗಳ ಅನುಷ್ಠಾನದ ಹಂತದಲ್ಲಿ ಲೋಪದೋಷ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತದ ಮೇಲಿದೆ. ಮೂಲಸೌಕರ್ಯದ ಹೂಡಿಕೆಯಲ್ಲಿ ಕೊರತೆ ಆದರೆ ಅದರ ಪರಿಣಾಮ ಉದ್ಯೋಗ ಸೃಷ್ಟಿಯ ಮೇಲೆ ಆಗಿ, ಆದಾಯ ಗಳಿಕೆಯೂ ಕಡಿಮೆ ಆಗಲಿದೆ. ಇದರ ಕಡೆಗೂ ಲಕ್ಷ್ಯ ಇರಲಿ ಎಂದು ಅವರು ತಿಳಿಸಿದರು.