ರಸ್ತೆಗಳ ಬದಿ ಗಿಡ ನೆಡುವ ಜವಾಬ್ದಾರಿಯನ್ನು ಶಾಲಾ ಮಕ್ಕಳಿಗೆ ಕೊಡಿ: ಡಿ.ಕೆ ಶಿವಕುಮಾರ್
ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಕೊಟ್ಟ ಮೊದಲ ಟಾಸ್ಕ್ ಏನು?
ಬೆಂಗಳೂರು, ಜೂ.5: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ರಸ್ತೆಗಳಲ್ಲಿ ಮರಗಳಿಲ್ಲ ಎಂದು ತಕ್ಷಣ ವರದಿ ಸಿದ್ದಪಡಿಸಬೇಕು. ಆ ರಸ್ತೆಗಳಲ್ಲಿ ಸ್ಥಳೀಯ ಶಾಲಾ ಮಕ್ಕಳಿಂದ ಗಿಡ ನೆಡಿಸಿ, ಆ ಗಿಡವನ್ನು ಬೆಳೆಸುವ ಜವಾಬ್ದಾರಿಯನ್ನು ಆ ಮಕ್ಕಳಿಗೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ನಗರದ ರಾಚೇನಹಳ್ಳಿಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೀತಿಯಾಗಿ ಮಕ್ಕಳು ನಡಲು ಬೇಕಾದ ಸಸಿಗಳು, ರಕ್ಷಾ ಪಂಜರಗಳನ್ನು ಪಾಲಿಕೆ ನೀಡಬೇಕು. ಮರ ಬೆಳೆಸುವ ವಿಚಾರದಲ್ಲಿ ಮಕ್ಕಳಲ್ಲಿ ಸ್ಪರ್ಧೆ ಏರ್ಪಡಿಸಬೇಕು. ಆಗ ಮಕ್ಕಳು ಸಂತೋಷದಿಂದ, ಬಹಳ ಕಾಳಜಿಯಿಂದ ಗಿಡ, ಮರ ಬೆಳೆಸಲು ಆಸಕ್ತಿ ತೋರುತ್ತಾರೆ ಎಂದರು.
ನಾವು ಮಕ್ಕಳನ್ನು ಸಾಕುವಂತೆ ಮರ ಗಿಡಗಳನ್ನು ಬೆಳೆಸಬೇಕು. ಆಗ ಪರಿಸರ ದಿನಕ್ಕೆ ಅರ್ಥ ಬರುತ್ತದೆ. ಮುಂದಿನ ಒಂದು ತಿಂಗಳಲ್ಲಿ ಈ ಬಗ್ಗೆ ಒಂದು ಪರಿಪೂರ್ಣ ಯೋಜನೆ ರೂಪಿಸಬೇಕು. ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ನಾನು ಪಾಲಿಕೆ ಅಧಿಕಾರಿಗಳಿಗೆ ನೀಡುತ್ತಿರುವ ಮೊದಲನೆಯ ಕೆಲಸ ಇದು ಎಂದು ಅವರು ಹೇಳಿದರು.
ನೀವು ಊಟಕ್ಕೆ ಮೀನು ಕೊಟ್ಟರೆ ಅದು ಒಂದು ಹೊತ್ತಿನ ಹೊಟ್ಟೆ ತುಂಬಿಸಲು ಸೀಮಿತವಾಗುತ್ತದೆ. ಅದೇ ನೀವು ಮೀನುಗಾರಿಕೆ ಕೌಶಲ್ಯ ಕಲಿಸಿದರೆ ಅದು ಜೀವನಪೂರ್ತಿ ನೆರವಾಗುತ್ತದೆ. ಹೀಗಾಗಿ ಅಧಿಕಾರಿಗಳು ಜೀವನಪೂರ್ತಿ ಪ್ರಯೋಜನವಾಗುವಂತಹ ಯೋಜನೆಗಳನ್ನು ಸಮಾಜಕ್ಕೆ ರೂಪಿಸಬೇಕು. ಪರಿಸರ ಹೇಗೆ ಬಳಸಿಕೊಳ್ಳಬೇಕು, ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತರಬೇತಿ, ಮಾರ್ಗದರ್ಶನ ನೀಡಬೇಕು ಎಂದರು.
ಉದ್ಯಾನವನಗಳಲ್ಲಿ ಮರಗಳನ್ನು ಬೆಳೆಸುವುದರಲ್ಲಿ ಅರ್ಥವಿಲ್ಲ. ಉದ್ಯಾನವನಗಳು ಉದ್ಯಾನವನಗಳ ರೀತಿ ಇರಲಿ. ಉದ್ಯಾನವನಗಳಲ್ಲಿ ಅರಣ್ಯ ನಿರ್ಮಿಸುವುದು ಬೇಡ. ಎಲ್ಲಿ ಮರಗಳು ಇಲ್ಲವೋ ಅಲ್ಲಿ ಗಿಡ ನೆಡುಬೇಕು. ಪರಿಸರ ಸಂರಕ್ಷಣೆ ದೀರ್ಘಕಾಲದ ಯೋಜನೆ ಬೇಕು. ಬಾಲಗಂಗಾಧರನಾಥ ಸ್ವಾಮೀಜಿಗಳು 5ಕೋಟಿ ಗಿಡ ನೆಡುವ ಕಾರ್ಯಕ್ರಮ ಮಾಡಿದ್ದರು. ಆಪೈಕಿ 1ಕೋಟಿ ಮರಗಳಾದರೂ ಉಳಿದುಕೊಂಡಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಎಲ್ಲಿ ಹಸಿರು ಇಲ್ಲವೋ ಅಲ್ಲಿ ಗಿಡಮರಗಳನ್ನು ಬೆಳೆಸಲು ಗಮನ ಹರಿಸಬೇಕು. ನಗರವು ತನ್ನ ಹಸಿರು ಪರಿಸರದಿಂದ ಹೆಸರು ಮಾಡಿದೆ. ಹೀಗಾಗಿ ನಗರದಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸಲು ಸೂಕ್ತ ಯೋಜನೆ ರೂಪಿಸಬೇಕು. ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಪರಿಸರ ಸಂರಕ್ಷಣೆ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.