ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ವಿಚಾರ; ಜೆಡಿಎಸ್ MLC ಟಿ.ಎ.ಶರವಣ ಪ್ರತಿಕ್ರಿಯೆ ಏನು?
Update: 2023-06-05 15:39 GMT
ಬೆಂಗಳೂರು, ಜೂ 5: ಮುಂಬರುವ ಯಾವುದೇ ಚುನಾವಣೆಗಳಲ್ಲಿ ಜೆಡಿಎಸ್ ಯಾವ ಪಕ್ಷದೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ಮುಖಂಡ ಟಿ.ಎ.ಶರವಣ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಯಾವತ್ತೂ ಒಳ ಒಪ್ಪಂದ ಮಾಡಿಕೊಂಡವರಲ್ಲ, ಅದೇನಿದ್ದರೂ ಬಹಿರಂಗವಾಗಿಯೇ ಮಾಡುತ್ತಾರೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅನುಭವಿಸಿದ ಸೋಲಿಗೆ ಬಿಜೆಪಿಯೇ ನೇರ ಕಾರಣವಾಗಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಯಾವುದೇ ರೀತಿಯ ಒಪ್ಪಂದವಿಲ್ಲ, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಶರವಣ ಸಲಹೆ ನೀಡಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ.