ನಾಲ್ಕು ತಿಂಗಳಲ್ಲಿ 4 ಸಾವಿರ ಸಸಿಗಳನ್ನು ನೆಡಲು ಕೆಎಸ್ಸಾರ್ಟಿಸಿ ಚಿಂತನೆ
ಬೆಂಗಳೂರು, ಜೂ 5: ಮುಂದಿನ ನಾಲ್ಕು ತಿಂಗಳುಗಳಲ್ಲಿ ಒಟ್ಟು 4 ಸಾವಿರ ಸಸಿಗಳನ್ನು ನೆಡಲು ವಿಭಾಗವಾರು ಯೋಜನೆಯನ್ನು ರೂಪಿಸಲಾಗಿದೆ. ಅಲ್ಲದೆ, ನಿಗಮದ 15 ವಿಭಾಗಗಳಲ್ಲಿ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳನ್ನು ಅಂತರ್ಜಾಲಗೊಳಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡಮರಗಳು ಪ್ರಾಣಿ-ಪಕ್ಷಿಗಳ ಸಂಕುಲವನ್ನು ಕಾಪಾಡಿ ಪ್ರಕೃತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡುವಲ್ಲಿ ಕೈಜೋಡಿಸಬೇಕು ಎಂದರು.
ಕೆಎಸ್ಸಾರ್ಟಿಸಿ ವಿಭಾಗಗಳ ವ್ಯಾಪ್ತಿಯಲ್ಲಿರುವ ಪ್ರಮುಖ ಬಸ್ ನಿಲ್ದಾಣಗಳ ಆವರಣದಲ್ಲಿ ಶುಚಿತ್ವದ ಜೊತೆಗೆ ಪರಿಸರ ಸಂರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ನಿಗಮದ ಎಲ್ಲ ಅಧಿಕಾರಿ, ಸಿಬ್ಬಂದಿ, ಮೇಲ್ಲಿಚಾರಕರು, ತಾಂತ್ರಿಕ/ಚಾಲನಾ ಸಿಬ್ಬಂದಿಗಳು ಸಾರ್ವಜನಿಕ ಸ್ವಯಂ ಸೇವಕರು ಸಂಘ ಸಂಸ್ಥೆಯ ಕಾರ್ಯಕರ್ತರು ಶಾಲಾ ಮಕ್ಕಳು, ಎನ್‍ಸಿಸಿ ಅವರೊಡನೆ ಒಟ್ಟುಗೂಡಿ ಚರ್ಚಿಸಿ, ಶ್ರಮದಾನದ ಮೂಲಕ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದೇವೆ ಎಂದು ಅನ್ಬುಕುಮಾರ್ ತಿಳಿಸಿದರು.
ನಿಗಮದ ಪ್ರಕೃತಿ ಎಂಬ ವಾಹನದೊಂದಿಗೆ ತಾಂತಿಕ ಸಿಬ್ಬಂದಿಗಳ ತಂಡವನ್ನು ರಚಿಸಿದ್ದು, ಎಲ್ಲ ವಿಭಾಗಗಳ ಘಟಕಗಳಿಗೆ ಭೇಟಿ ನೀಡಿ, ಘಟಕಗಳ ಪರಿವೀಕ್ಷಣೆ ಹಾಗೂ ವಾಹನಗಳ ಅನಿರೀಕ್ಷಿತ ವಾಯು ಮಾಲಿನ್ಯ ಹೊಗೆ ತಪಾಸಣೆ ಮಾಡಲಾಗುತ್ತಿದೆ. ಬಸ್ ನಿಲ್ದಾಣ, ಘಟಕ, ವಿಭಾಗೀಯ ಕಚೇರಿ ಹಾಗೂ ಕಾರ್ಯಾಗಾರಗಳಲ್ಲಿ ಧೂಮಪಾನ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದ ಪ್ರತಿ ವ್ಯಕ್ತಿಗೆ 200 ರೂ.ನಂತೆ ದಂಡವನ್ನು ವಿಧಿಸಿದ್ದು, ಈಗಾಗಲೇ 29,51,200 ರೂ.ದಂಡ ಸಂಗ್ರಹಿಸಲಾಗಿದೆ. ಅಲ್ಲದೆ ಈ ಸ್ಥಳಗಳಲ್ಲಿ ಬಯಲು ಮೂತ್ರ ವಿಸರ್ಜನೆಯನ್ನೂ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದ ಪ್ರತಿ ವ್ಯಕ್ತಿಗೆ 100ರೂ.ನಂತೆ ದಂಡವನ್ನು ವಿಧಿಸಿದ್ದು, ಈವರೆಗೆ 17,12,800ರೂ.ದಂಡ ಸಂಗ್ರಹಿಸಲಾಗಿದೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.