ಪಕ್ಷದ 13 ಸಂಸದರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದ್ದರೂ ಬಿಜೆಪಿ ನಾಯಕರ ಮೌನವೇಕೆ?: ಸದಾನಂದಗೌಡ ಬೇಸರ

''ಕೆಲವು ಸಂಸದರು ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ...''

Update: 2023-06-06 12:25 GMT

ಬೆಂಗಳೂರು, ಜೂ.6: 'ರಾಜ್ಯದ 13 ಮಂದಿ ಬಿಜೆಪಿ ಪಕ್ಷದ ಸಂಸದರು ಯಾವುದೇ ಕೆಲಸ ಮಾಡಿಲ್ಲ, ಅಯೋಗ್ಯರು ಎಂದು ಮಾನಹಾನಿ ಆಗುವ ರೀತಿ ವರದಿಗಳ ಕುರಿತು ರಾಜ್ಯದ ಬಿಜೆಪಿ ನಾಯಕರು ಮೌನವಾಗಿ ಇರುವುದು ಏಕೆ?' ಎಂದು ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ ಪ್ರಶ್ನೆ ಮಾಡಿದ್ದಾರೆ.

ಮಂಗಳವಾರ ನಗರದ ವಿವಿ ಟವರ್ ನಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 13 ಮಂದಿ ಬಿಜೆಪಿ ಸಂಸದರ ಮಾನಹಾನಿ ಆಗುತ್ತಿರುವುದು ನೋಡಿಯೂ ಸ್ಪಷ್ಟನೆ ನೀಡದಿರುವುದು ತರವಲ್ಲ. ಇದು ರಾಜ್ಯಕ್ಕೆ ಬೇರೆ ರೀತಿಯ ಸಂದೇಶ ಹೋಗಲಿದೆ. ಆಗುತ್ತಿರುವಗೊಂದಲಕ್ಕೆ ಕೂಡಲೇ ಪರಿಹರಿಸುವ ಕೆಲಸವನ್ನು ಸಂಬಂಧಪಟ್ಟ ನಾಯಕರು ಮಾಡಬೇಕಿದೆ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಆಯ್ಕೆಯಾಗಿರುವ 25 ಬಿಜೆಪಿ ಸಂಸದರ ಪೈಕಿ 13 ಮಂದಿ ನಾಲಾಯಕ್ ಸಂಸದರು ಎಂದು ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಈ ಮೂಲಕ ಹಿರಿಯ ಸಂಸದರ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನವಾಗುತ್ತಿದೆ. ಕೂಡಲೇ ರಾಷ್ಟ್ರೀಯ ಹಾಗೂ ರಾಜ್ಯದ ಬಿಜೆಪಿ ನಾಯಕರು ಮಧ್ಯಪ್ರವೇಶಿಸಿ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.

ಲೋಕಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿದೆ. ಈ ಹಂತದಲ್ಲಿರುವಾಗಲೇ ಸಂಸದರನ್ನು ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಮಾನಹಾನಿ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆಯ್ಕೆಯಾಗಿರುವ 25 ಸಂಸದರ ಪೈಕಿ 13 ಮಂದಿ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಮಾಡಿಲ್ಲ. ಇನ್ನೂ ಕೆಲ ಸಂಸದರು ಅನಾರೋಗ್ಯ ಪೀಡಿತರಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ರೀತಿಯಲ್ಲಿ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಎಂದರು. ಅಲ್ಲದೆ,  ಮತದಾರರಿಂದ ಆಯ್ಕೆಗೊಂಡ ಸಂಸದರನ್ನು ತೇಜೋವಧೆ ಮಾಡುವ ಕೆಲಸ ಎಷ್ಟು ಸರಿ? ಈ ಬಗ್ಗೆ ನನಗೆ 12 ಮಂದಿ ಸಂಸದರು ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ, ಕೂಡಲೇ ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಇತಿಶ್ರೀ ಹಾಡಬೇಕಿದೆ ಎಂದು ಆಗ್ರಹಿಸಿದರು.

Similar News