ಬಿಜೆಪಿಯೊಂದಿಗೆ ಕೈಜೋಡಿಸದ ಯಾವ ಪಕ್ಷವೂ ಇಲ್ಲ: ಎಚ್.ಡಿ.ದೇವೇಗೌಡ
ಬೆಂಗಳೂರು, ಜೂ.6: ದೇಶದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸದ ಯಾವ ಪಕ್ಷವೂ ಇಲ್ಲ. ಎಲ್ಲ ಪಕ್ಷಗಳೂ ಬಿಜೆಪಿ ಜತೆ ನೇರವಾಗಿ ಅಥವಾ ಪರೋಕ್ಷವಾಗಿ ಕೈಜೋಡಿಸಿವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಮಂಗಳವಾರ ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆಸುತ್ತಿರುವ ಪ್ರಯತ್ನದಲ್ಲಿ ಜೆಡಿಎಸ್ ಕೈ ಜೋಡಿಸಲಿದೆಯೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಬಿಜೆಪಿ ಜತೆ ಯಾವ ಪಕ್ಷ ಕೈ ಜೋಡಿಸಿಲ್ಲ ತೋರಿಸಿ, ಆ ನಂತರ ವಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುವೆ ಎಂದು ಸವಾಲು ಹಾಕಿದರು.
ಈಗ ಲೋಕಸಭಾ ಚುನಾವಣೆಯ ಬಗ್ಗೆ ಚಿಂತಿಸುವುದಿಲ್ಲ. ಶೀಘ್ರದಲ್ಲೇ ಜಿ.ಪಂ., ತಾ.ಪಂ. ಮತ್ತು ಬಿಬಿಎಂಪಿ ಚುನಾವಣೆಗಳಿವೆ. ಈ ಚುನಾವಣೆಗಳಲ್ಲಿ ಪಕ್ಷ ಪಡೆಯುವ ಜನಬೆಂಬಲ ಆಧರಿಸಿ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ, ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಚುನಾವಣೆಗಳಿಗೆ ಒಂದಿಷ್ಟು ಕಡೆ ನಮ್ಮ ಶಕ್ತಿ ಇಲ್ಲದೇ ಇದ್ದರೂ, ಸಮರ್ಥ ಅಭ್ಯರ್ಥಿಗಳಿದ್ದಾರೆ. ಎಲ್ಲಾ ಸಮುದಾಯಕ್ಕೂ ಅವಕಾಶ ಕೊಡಬೇಕು. ಪ್ರತಿ ಸಮುದಾಯ ಗುರುತಿಸುವ ಕೆಲಸ ಆಗಬೇಕಿದೆ ಎಂದು ಎಚ್.ಡಿ. ದೇವೇಗೌಡ ತಿಳಿಸಿದರು.
ವಿಧಾನಸಭಾ ಚುನಾವಣೆಯ ಸೋಲಿನಿಂದ ಪಕ್ಷದ ಕಾರ್ಯಕರ್ತರು ಹತಾಶರಾಗಬೇಕಿಲ್ಲ. ರಾಜ್ಯದ ಜನತೆ ನಮ್ಮೊಂದಿಗೆ ಇದ್ದಾರೆ. ಯುವಕರು ಸಹ ಪಕ್ಷ ಕಟ್ಟುವ ಉತ್ಸಾಹದಲ್ಲಿದ್ದು, ನಾನೂ ಸುಮ್ಮನೆ ಕೂರುವುದಿಲ್ಲ. ಸಮರ್ಥ ಯುವಕರ ಹೊಸ ತಂಡವೊಂದನ್ನು ರಚಿಸಿ ಅವರ ಜೊತೆಯಲ್ಲಿ ಕೆಲಸ ಮಾಡಲು ಸಿದ್ದನಿದ್ದೇನೆ. ಎಲ್ಲ ಹಂತಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಮತ್ತೆ ಬಲವಾಗಿ ಪಕ್ಷವನ್ನು ಕಟ್ಟುವುದು ನಮ್ಮ ಮುಂದಿನ ಗುರಿ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ನನಗೆ 91 ವರ್ಷ, ಲೋಕಸಭೆ ಸ್ಪರ್ಧೆ ಅಪ್ರಸ್ತುತ: ಎಚ್‍ಡಿ ದೇವೇಗೌಡ
ಲೋಕಸಭಾ ಚುನಾವಣೆಗೆ ನೀವು ಸ್ಪರ್ಧೆ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಈಗ 91 ವರ್ಷ ವಯಸ್ಸು, ಆದ್ದರಿಂದ ನಾನು ಚುನಾವಣೆಗೆ ನಿಲ್ಲುವ ಬಗ್ಗೆ ಚರ್ಚೆ ಅಪ್ರಸ್ತುತ. ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಯೋಚನೆ ಮಾಡೋಣ. ನಂತರ ಯಾರು ಅಭ್ಯರ್ಥಿಗಳಾಗಬೇಕು, ಎಲ್ಲಿ ನಿಲ್ಲಬೇಕು ಎಂಬುದರ ಕುರಿತು ಚರ್ಚೆ ಮಾಡುತ್ತೇವೆ.
-ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠರು.