NEP ರದ್ದುಗೊಳಿಸುವ ಕುರಿತು ತಜ್ಞರ ಜೊತೆ ಚರ್ಚಿಸಿ ತೀರ್ಮಾನ: ಸಚಿವ ಡಾ.ಎಂ.ಸಿ.ಸುಧಾಕರ್
ಬೆಂಗಳೂರು, ಜೂ.6: ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಚರ್ಚಿಸಲು ಶಿಕ್ಷಣ ತಜ್ಞರ ಜೊತೆ ನಡೆಸಿದ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶಿಕ್ಷಣ ತಜ್ಞ ನಿರಂಜನಾರಾಧ್ಯ ನೇತೃತ್ವದಲ್ಲಿ ಅನೇಕ ತಜ್ಞರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಉನ್ನತ ಶಿಕ್ಷಣ ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಬಳಿಕ, ಇಲಾಖೆ ವತಿಯಿಂದ ಶಿಕ್ಷಣ ನೀತಿ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.
ಇದರ ಸಾಧಕ ಭಾದಕದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲು ನಿರ್ಧಾರಿಸಲಾಗಿದೆ. ಅದರ ಭಾಗವಾಗಿ ಹಿರಿಯರನ್ನು ಕರೆದು ಚರ್ಚೆ ಮಾಡುತ್ತೇವೆ. ಈ ಹಿಂದೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಭೆ ಮಾಡಿದಾಗ ಯಾರೆಲ್ಲಾ ಭಾಗಿಯಾಗಿದ್ದರೋ ಅವರ ಜೊತೆ ನಾವು ಚರ್ಚೆ ಮಾಡಲಿದ್ದೇವೆ ಎಂದು ಸುಧಾಕರ್ ಹೇಳಿದರು.
ವಿಶ್ವವಿದ್ಯಾಲಯಗಳ ಕುಲಪತಿಗಳು, ವಿಶ್ರಾಂತ ಕುಲಪತಿಗಳ ನಿಯೋಗವು ಬಂದಿತ್ತು. ಅವರಿಂದಲೂ ಅಭಿಪ್ರಾಯ ಪಡೆಯಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಬಂದು ಒಂದು ವರ್ಷವಾಗಿದೆ. ಅದರ ಬಗ್ಗೆ ಪ್ರಾಧ್ಯಾಪಕರ ಬಳಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಜೊತೆಗೆ ನಮ್ಮ ಪಕ್ಷದಲ್ಲಿಯೂ ಹಿರಿಯರ ಅಭಿಪ್ರಾಯ ಪಡೆಯಲಾಗುತ್ತಿದೆ. ಮೂಲಭೂತವಾಗಿ ಇಷ್ಟು ಬೇಗ ಅನುಷ್ಠಾನ ತರುವ ಅವಶ್ಯಕತೆ ಇತ್ತಾ ಅನ್ನೋದು ಪ್ರಶ್ನೆ? ಪಠ್ಯದ ಬಗ್ಗೆ ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರು ಸಭೆ ಕರೆದಿದ್ದಾರೆ. ಆನಂತರ, ನಾವಿಬ್ಬರೂ ಸಚಿವರು ಸೇರಿ ಸಭೆ ಮಾಡಿ ನಿರ್ಧಾರ ಮಾಡಲಿದ್ದೇವೆ ಎಂದು ಸುಧಾಕರ್ ತಿಳಿಸಿದರು.
ರಾಜ್ಯ ಪಠ್ಯಕ್ರಮ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆ ಮಾಡುತ್ತೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಭವಿಷ್ಯದ ದೃಷ್ಟಿಯಿಂದ ಪರ ಮತ್ತು ವಿರೋಧ ಎರಡೂ ಇದೆ. ನಾವು ಅಳೆದು ತೂಗಿ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಿದೆ. ಪದವಿ ಪಡೆದ ಬಳಿಕ ಉದ್ಯೋಗ ಅವಕಾಶ ಸಿಗುವುದರ ಕಡೆ ಗಮನ ಹರಿಸುತ್ತೇವೆ. ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡುವ ಬಗ್ಗೆ ಮುಂದೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ನಾನು ಒಬ್ಬ ಶಿಕ್ಷಕನಾಗಿದ್ದೆ. ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಘೋಷಣೆ ಮಾಡಿದ್ದೇವೆ ಎಂದು ಸುಧಾಕರ್ ತಿಳಿಸಿದರು