ಜಾನುವಾರು ಹತ್ಯೆ ಕಾಯ್ದೆ ಸೇರಿ ರೈತ ವಿರೋಧಿ ಕಾಯ್ದೆಗಳ ಮರುಪರಿಶೀಲನೆ: ಸಿಎಂ ಸಿದ್ದರಾಮಯ್ಯ
Update: 2023-06-07 13:34 GMT
ಬೆಂಗಳೂರು, ಜೂ.7: ಜಾನುವಾರು ಹತ್ಯೆ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿಕಾಯ್ದೆ ಸೇರಿದಂತೆ ಇನ್ನಿತರೆ ಕಾಯ್ದೆಗಳನ್ನು ಮರುಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ವಿವಿಧ ರೈತ ಮುಖಂಡರ ಜೊತೆ ಮಾತುಕತೆ ನಡೆಸಿದ ಅವರು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ನೀತಿ, ನಿಯಮಾವಳಿಗಳ ಕುರಿತು ವಿವರವಾಗಿ ಪ್ರತ್ಯೇಕವಾಗಿ ಚರ್ಚಿಸಲು ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.
ಇನ್ನೂ, ಇದೇ ವೇಳೆ ಕೇಂದ್ರ ಸರಕಾರವು ಕಾರ್ಪೊರೇಟ್ ಕೃಷಿಯನ್ನು ಪರಿಚಯಿಸುವುದರಿಂದ ಶೇ.85 ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತೊಂದರೆಯಾಗಲಿದೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ನಾಯಕರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ಜಿ.ಸು.ಬೈಯ್ಯಾರೆಡ್ಡಿ, ಎಚ್.ಆರ್.ಬಸವರಾಜಪ್ಪ ಸೇರಿದಂತೆ ಪ್ರಮುಖರಿದ್ದರು.