ಕರಾರು ಪತ್ರ ಇಲ್ಲದಿದ್ದರೂ,ಬಾಡಿಗೆದಾರರಿಗೆ ಉಚಿತ ವಿದ್ಯುತ್ ಯೋಜನೆ ಅನ್ವಯ: ಸಚಿವ ಕೆ.ಜೆ.ಜಾರ್ಜ್

Update: 2023-06-07 14:12 GMT

ಬೆಂಗಳೂರು, ಜೂ.7: ರಾಜ್ಯ ಸರಕಾರ ಜಾರಿಗೊಳಿಸಿರುವ ಗೃಹಜ್ಯೋತಿ ಯೋಜನೆಗೆ ಜೂ.15ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಬಾಡಿಗೆದಾರರು ತಮ್ಮ ಬಾಡಿಗೆ ಕರಾರು ನೀಡುವುದು ಕಡ್ಡಾಯವಲ್ಲ. ಬದಲಾಗಿ ಆಧಾರ್ ಕಾರ್ಡ್, ಗುರುತಿನ ಚೀಟಿಗಳನ್ನು ಆರ್.ಆರ್.ನಂಬರ್‍ಗೆ(ಪ್ರತಿ ಮೀಟರಿಗೆ ನೀಡುವ ವಿಶಿಷ್ಟ ಗುರುತಿನ ಸಂಖ್ಯೆ) ಲಿಂಕ್ ಮಾಡಿಸಿದರೆ ಸಾಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಬೆಸ್ಕಾಂ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಜ್ಯೋತಿ ಯೋಜನೆ ಜಾರಿಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. 200 ಯೂನಿಟ್ ವರಗೆ ಉಚಿತ ನೀಡಲಾಗುತ್ತದೆ. ಗೃಹ ಬಳಕೆ ಬಳಕೆದಾರರು ಸರಾಸರಿ ಒಂದು ವರ್ಷ ಬಳಕೆ ಮಾಡಿದ ವಿದ್ಯುತ್ ಅಂಕಿ-ಅಂಶಗಳನ್ನು ಪಡೆದುಕೊಂಡು ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ ಎಂದರು.

ಪ್ರತಿ ಮನೆಗೊಂದು ಪ್ರತ್ಯೇಕ ಮೀಟರ್ ಇದ್ದು, ಆ ಮೀಟರ್ ಗೆ ಆರ್.ಆರ್.ನಂಬರ್(ರೆವಿನ್ಯೂ ರಿಜಿಸ್ಟರ್ ನಂಬರ್) ಕೊಡಲಾಗಿರುತ್ತದೆ. ಗೃಹ ಜ್ಯೋತಿ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಬಾಡಿಗೆದಾರರು ತಮ್ಮ ಮನೆಯ ಮೀಟರ್ ನ ಆರ್.ಆರ್. ನಂಬರ್ ಗೆ ತಾವು ತಮ್ಮ ಮನೆ ಮಾಲಕರೊಂದಿಗೆ ಮಾಡಿಕೊಂಡಿರುವ ಬಾಡಿಗೆ ಕರಾರು ಪತ್ರದ ಜೆರಾಕ್ಸ್ ಪ್ರತಿಯನ್ನು ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ನೀಡಿ ಲಿಂಕ್ ಮಾಡಿಸಬೇಕು ಎಂದರು.

ಒಂದು ವೇಳೆ ಕರಾರು ಪತ್ರ ಇಲ್ಲದಿದ್ದರೆ, ಆಧಾರ್ ಅಥವಾ ಇತರೆ ದಾಖಲೆ ನೀಡಿದರೂ, ಪರಿಶೀಲನೆ ನಡೆಸಿ, ಯೋಜನೆ ಫಲಾನುಭವಿಗಳಾಗಿ ಮಾಡುತ್ತೇವೆ. ಜೂ.15ರಿಂದ ಯೋಜನೆಯನ್ನು ಜಾರಿ ಮಾಡುತ್ತೇವೆ. ಗ್ರಾಹಕರು ಸರಾಸರಿ ಬಿಲ್ ಗಿಂತ ಹೆಚ್ಚು ಉಪಯೋಗ ಮಾಡಿದರೆ ಹೆಚ್ಚುವರಿ ಬಳಕೆಗೆ ಬಿಲ್ ಕಟ್ಟಬೇಕಿದೆ ಎಂದು ಅವರು ಕೆ.ಜೆ.ಜಾರ್ಜ್ ತಿಳಿಸಿದರು.

ಹೊಸ ಮನೆ ನಿರ್ಮಾಣ ಮಾಡಿದವರು ಹಾಗೂ ಬಾಡಿಗೆದಾರ ಹೊಸತಾಗಿ ಬಂದರೆ ಅಂತಹ ಗ್ರಾಹಕರಿಗೆ ಈ ಯೋಜನೆ ಅನ್ವಯ ಆಗುತ್ತಾ? ಎಂಬ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಇನ್ನೂ,  ರಾಜ್ಯದಲ್ಲಿ ಒಟ್ಟು  2. 16 ಕೋಟಿ ಗ್ರಾಹಕರು ಇದ್ದಾರೆ. ಈ ಪೈಕಿ 200 ಯೂನಿಟ್ ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರು 2.14 ಕೋಟಿ ಇದ್ದಾರೆ. ಎರಡು ಲಕ್ಷ ಜನರು 200 ಯೂನಿಟ್ ಹೆಚ್ಚು ಬಳಕೆ ಮಾಡುತ್ತಾರೆ ಎಂದು ವಿವರಿಸಿದ ಅವರು, ಗೃಹ ಜ್ಯೋತಿ ಯೋಜನೆ ಜಾರಿಗೆ ಒಟ್ಟು 13 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಉಲ್ಲೇಖ ಮಾಡಿದರು.

Similar News