ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆದು, ವೈಜ್ಞಾನಿಕ ಕಾಯ್ದೆ ಜಾರಿಗೊಳಿಸಿ: ಚಿಂತಕ ಅಗ್ನಿಶ್ರೀಧರ್

''ಗೋವಿನ ಮಾಂಸದ ರಫ್ತು ವಿಚಾರದಲ್ಲಿ ಭಾರತ ಎಲ್ಲಾ ದೇಶಗಳನ್ನು ಹಿಂದಿಕ್ಕಿದೆ''

Update: 2023-06-07 15:44 GMT

ಬೆಂಗಳೂರು, ಜೂ.7: ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದು ವೈಜ್ಞಾನಿಕವಾಗಿ ಹೊಸ ಕಾಯ್ದೆಯನ್ನು ಜಾರಿಗೆ ತರುವಂತೆ ಹಿರಿಯ ಪತ್ರಕರ್ತ, ಚಿಂತಕ ಅಗ್ನಿ ಶ್ರೀಧರ್ ಆಗ್ರಹಿಸಿದ್ದಾರೆ.

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆಹಾರದ ಹಕ್ಕಿನ ವಿಚಾರವಾಗಿರುವ ಇದನ್ನು ಭಾವನಾತ್ಮಕ ನೆಲೆಯಲ್ಲಿ ಚರ್ಚೆಗೆ ಎಳೆದು ತರಲಾಗಿದೆ. ಹಸುವನ್ನು ಕೊಂದರೆ ತಾಯಿಯನ್ನು ಕೊಂದಂತೆ ಎಂಬ ಹೇಳಿಕೆಗಳ ಮೂಲಕ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಬಿಜೆಪಿ ಬೆಂಬಲಿತ ಗುಂಪುಗಳು ಮಾಡುತ್ತಿವೆ. ಅಂತವರಿಗೆ ಕೇಳಬೇಕಿರುವುದು, ಯಾವಾಗ ನಿಮ್ಮ ತಾಯಿಯನ್ನು ಪರಿಷೆ, ಜಾತ್ರೆಗಳಲ್ಲಿ ಖರೀದಿಸಿಲು ಆರಂಭಿಸಿದಿರಿ, ಯಾಕೆ ನಿಮ್ಮ ತಾಯಿಯನ್ನು ರಸ್ತೆಗಳಿಗೆ ಬಿಡುತ್ತಿದ್ದೀರಿ. ಯಾಕೆ ವಯಸ್ಸಾದ ಹಸುಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಲು ಸೋತಿದ್ದೀರಿ ಎಂದು ಪ್ರಶ್ನಿಸಿದರು.

ಗೋವಿನ ಮಾಂಸದ ರಫ್ತು ವಿಚಾರದಲ್ಲಿ ಭಾರತ ಎಲ್ಲಾ ದೇಶಗಳನ್ನು ಹಿಂದಿಕ್ಕಿದೆ. ವರ್ಷಕ್ಕೆ 40 ಸಾವಿರ ಕೋಟಿ ರೂಪಾಯಿ ಉದ್ಯಮ ಇದಾಗಿದೆ. ಈ ಮೊದಲು ಮುಸ್ಲಿಮ್ ಸಮುದಾಯ ಇದರಲ್ಲಿ ದೊಡ್ಡ ಪಾಲು ಹೊಂದಿತ್ತು. ಆದರೆ ಜೈನ ಉದ್ಯಮದ ಲಾಭಿ ಮುಸಲ್ಮಾನರನ್ನು ಗೋವಿನ ಮಾಂಸ ರಫ್ತಿನ ವಿಚಾರದಲ್ಲಿ ಹೊರಗಿಡಲು ಇಂತಹ ತರ್ಕ ಮೀರಿದ ಕಾನೂನು ಸಹಾಯ ಮಾಡಿತು ಎಂದು ಆರೋಪ ಮಾಡಿತು. ಈ ಹುನ್ನಾರದ ಹಿಂದೆ ಜೈನ ಸಮುದಾಯವಿದೆ ಎಂದು ಅಗ್ನಿ ಶ್ರೀಧರ್ ತಿಳಿಸಿದರು.

ಹಸುವಿನ ಮಾಂಸವನ್ನು ನಾನು ಕಂಡಂತೆ ಶ್ರೀಮಂತ ಮುಸ್ಲಿಮರು ತಿನ್ನುವುದಿಲ್ಲ. ಆದರೆ ಗೋ ಹತ್ಯೆ ಬಂದಾಗಲೆಲ್ಲಾ ಮುಸ್ಲಿಮರ ಆಹಾರ ಇದು ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ದಲಿತರು. ಕ್ರಿಶ್ಚಿಯನ್ನರು ಹಸುವಿನ ಮಾಂಸವನ್ನು ಹೆಚ್ಚು ಬಳಸುತ್ತಾರೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಮರೆಸುವ ಕೆಲಸ ನಡೆಯುತ್ತಿದೆ ಎಂದು ಅಗ್ನಿ ಶ್ರೀಧರ್ ಹೇಳಿದರು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಗೋ ಹತ್ಯೆ ನಿಷೇಧದ ಮೂಲಕ ರಾಜ್ಯದ ಕೃಷಿ ಕುಟುಂಬಗಳಲ್ಲಿ ಎದ್ದಿರುವ ಸಮಸ್ಯೆಗಳನ್ನು ವಿವರಿಸಿದರು. ಅಧಿಕಾರಿ ಹಾಗೂ ಶಾಸಕರುಗಳಿಗೆ ವಯಸ್ಸಾದ ದನಗಳನ್ನು ನೀಡಲು ರೈತ ಸಂಘ ತಯಾರಿದೆ. ಮೊದಲು ಜಾನುವಾರುಗಳನ್ನು ಸಾಕದೆ ಕಷ್ಟ ಅರ್ಥವಾಗುವುದಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಸೂದೆಯನ್ನು ವಾಪಾಸ್ ಪಡೆಯಬೇಕು. ವೈಜ್ಞಾನಿಕ ತಳಹದಿಯ ಮೇಲೆ ಹೊಸ ಮಸೂದೆಯನ್ನು ಜಾರಿಗೆ ತರಬೇಕು ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅರೆಶಂಕರ ಮಠದ ಚೈತನ್ಯ ಸಿದ್ಧರಾಮ ಸ್ವಾಮೀಜಿ, ನೇಹಾ, ಸೇರಿದಂತೆ ರಾಷ್ಟ್ರೀಯ ದ್ರಾವಿಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Full View

Similar News