ಬ್ಯಾಂಕ್ ವಂಚನೆ ಪ್ರಕರಣ: ಬೆಂಗಳೂರು, ದಾವಣೆಗೆರೆಯಲ್ಲಿ 100 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ ಹಚ್ಚಿದ ಈಡಿ
ಬೆಂಗಳೂರು, ಜೂ.7: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ್ ಇನ್ಫ್ರಾ ಎಕ್ಸ್ ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಲಿಮಿಟೆಡ್‍ನ ಬೆಂಗಳೂರು ಹಾಗೂ ದಾವಣಗೆರೆಯ ಕಚೇರಿಗಳಲ್ಲಿ ಶೋಧ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು(ಈಡಿ), 100 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.
ಬ್ಯಾಂಕ್‍ಗಳಿಂದ ಸಾಲ ಪಡೆದು ವಂಚಿಸಿರುವ ಆರೋಪ ಮೇಲೆ ಭಾರತ್ ಇನ್ಫ್ರಾ ಎಕ್ಸ್ ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಲಿಮಿಟೆಡ್ ವಿರುದ್ಧಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಈಡಿತನಿಖೆಯನ್ನು ಕೈಗೊಂಡಿದೆ.
ಬೆಂಗಳೂರು ಹಾಗೂದಾವಣಗೆರೆ ಜಿಲ್ಲೆಗಳಲ್ಲಿ ಈ ಕಂಪೆನಿಗಳಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಈ ಕಂಪೆನಿಯು 100 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿರುವ ಮಾಹಿತಿ ಪತ್ತೆಯಾಗಿದ್ದು, ಇದರಿಂದ 14.5 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಸಾಕ್ಷ್ಯಾಧಾರಗಳು ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ ಎಂದು ತಿಳಿಸಿದ್ದಾರೆ.