ಕಾಂಗ್ರೆಸ್ ಆಕಾಶದಲ್ಲಿದೆ, ನಾವು ನೆಲದಲ್ಲಿದ್ದೇವೆ: ಕುಮಾರಸ್ವಾಮಿ ವ್ಯಂಗ್ಯ
ಬೆಂಗಳೂರು, ಜೂ.7: ಕಾಂಗ್ರೆಸ್ ಗೆಲುವಿನ ಅಮಲಿನಲ್ಲಿ ಆಕಾಶದಲ್ಲಿದೆ. ನಾವು ನೆಲದಲ್ಲಿ ಇದ್ದೇವೆ. ನಾವು ಆಕಾಶಕ್ಕೆ ಏರಲು ಆಗುತ್ತಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರೂ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ. ನಾವು ಕಾಂಗ್ರೆಸ್ ಜೊತೆ ರಾಜಕೀಯದಲ್ಲಿ ಭಾಗಿಯಾಗಲು ಆಗುವುದೇ, ಕಾಂಗ್ರೆಸ್ ನವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ. ಕಾಂಗ್ರೆಸ್‍ನವರು ಆಕಾಶದ ಮೇಲೆ ಇದ್ದಾರೆ, ನಾವು ಭೂಮಿ ಮೇಲೆ ಇದ್ದೇವೆ. ಅಂತಹವರ ಜೊತೆ ನಾವು ಚರ್ಚೆ ಮಾಡಲು ಸಾಧ್ಯವೇ ಎಂದು ಮುಂದಿನ ಕಾಂಗ್ರೆಸ್‍ನೊಂದಿಗಿನ ಮೈತ್ರಿ ವಿಚಾರದ ಪ್ರಶ್ನೆಗೆ ಉತ್ತರಿಸಿದರು.
ಜನರು ಕಾಂಗ್ರೆಸ್‍ಗೆ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ. ಅವರನ್ನು ಮತ್ತೆ ಜನರು ಆಕಾಶದಿಂದ ಕೆಳಗೆ ಇಳಿಸಬೇಕು. ಅವರು ಭೂಮಿಗೆ ಬರುವ ತನಕ ನಾವು ಕಾಯಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರಾಜ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಉಪಮುಖ್ಯಮಂತ್ರಿ ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ಇವತ್ತು ಜಲಮಂಡಳಿ ನೌಕರರಿಗೆ ಸಂಬಳ ಕೊಡು ದುಡ್ಡು ಇಲ್ಲ. ಖಜಾನೆ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಸರಕಾರ ಹೇಳಿದ್ದಾರೆ ವಿದ್ಯುತ್ ದರ ಹೆಚ್ಚಿಸಿದೆ. ಈಗ ನೀರಿನ ದರವನ್ನು ಹೆಚ್ಚಳ ಮಾಡುವುದಕ್ಕೆ ಅವರು ಪರೋಕ್ಷ ಸುಳಿವು ನೀಡಿದ್ದಾರೆ. ಅಲ್ಲಿಗೆ ಈ ಸರಕಾರದ ನಿಜ ಬಣ್ಣ ಏನು ಎನ್ನುವುದು ಜನರಿಗೆ ಅರ್ಥವಾಗುತ್ತಿದೆ. ಒಂದು ಕೈಯ್ಯಲ್ಲಿ ಕೊಟ್ಟು ಎರಡು ಕೈಯ್ಯಲ್ಲಿ ಕಿತ್ತುಕೊಳ್ಳುವುದು. ಇದು ಈ ಸರಕಾರದ ಸಾಮಾಜಿಕ ನ್ಯಾಯ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಕಾಂತರಾಜು ವರದಿಯನ್ನು ಸ್ವೀಕಾರ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಆ ವರದಿ ಬರಲಿ, ಅದರಲ್ಲಿ ಏನೂ ಗುಮ್ಮ ಇದೆ ಎಂದು ನೋಡೋಣ. ಆ ವರದಿಯನ್ನು ಯಾವ ರೀತಿ ಬರೆಸಿಕೊಂಡಿದ್ದಾರೆ, ಹೇಗೆ ಬರೆಸಿದ್ದಾರೆ ಎಂಬುವುದನ್ನು ಗಮನಿಸೋಣ ಎಂದರು.