ಮಾತು ಕೇಳದಿದ್ದರೆ ಕಾನೂನು ಬಳಸಿ ಒತ್ತುವರಿ ತೆರವುಗೊಳಿಸಬೇಕಾಗುತ್ತದೆ: ಡಿಸಿಎಂ ಡಿಕೆಶಿ ಎಚ್ಚರಿಕೆ
''ದಿವ್ಯಶ್ರೀ, ಶಿವಕುಮಾರ್ ಯಾರೇ ಇರ್ಲಿ, ತೆರವು ಮಾಡ್ಬೇಕಷ್ಟೇ...''
ಬೆಂಗಳೂರು, ಜೂ.8: ನಗರದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವ ಬಿಲ್ಡರ್ಸ್‍ಗಳು ತಾವೇ ರಾಜಕಾಲುವೆ ತೆರವಿಗೆ ಸಹಕಾರ ನೀಡಿದರೆ ಒಳ್ಳೆಯದು. ಇಲ್ಲದಿದ್ದರೆ ನಮ್ಮ ಬಳಿ ಬೇರೆ ರೀತಿಯ ಕಾನೂನು ಅವಕಾಶಗಳಿದ್ದು, ಅವುಗಳನ್ನು ಬಳಸಬೇಕಾಗುತ್ತದೆ ಎಂದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ವರ್ತೂರಿನ ರಾಮಗೊಂಡನಹಳ್ಳಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಮಾತನಾಡಿದ ಅವರು, ನಗರದಲ್ಲಿ ಖಾಸಗಿಯವರು ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಅಲ್ಲದೆ ಒತ್ತುವರಿ ತೆರವು ಕಾರ್ಯಚಾರಣೆಯನ್ನು ನಡೆಸದಂತೆ ನ್ಯಾಯಾಲಯ ತಡೆಯಾಜ್ಞೆ ತಂದಿದ್ದಾರೆ. ಒತ್ತುವರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಬಿಲ್ಡರ್ಸ್‍ಗಳು, ಡೆವಲಪರ್ಸ್‍ಗಳು ರಾಜಕಾಲುವೆ ತೆರವಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ನಿಮ್ಮ ಕೆಲಸದಿಂದ ಮೇಲ್ಸೇತುವೆ, ರಾಜಕಾಲುವೆ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವಂತಾಗುತ್ತದೆ. ಇದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ದಿವ್ಯಶ್ರೀ ಅಪಾರ್ಟ್ ಮೆಂಟ್ ಇರಲಿ, ಡಿ.ಕೆ. ಶಿವಕುಮಾರ್ ಅಪಾರ್ಟ್ ಮೆಂಟ್ ಇರಲಿ. ರಾಜಕಾಲುವೆ, ರಸ್ತೆಗಳು ಎಷ್ಟು ಅಗಲ ಇರಬೇಕೋ ಅಷ್ಟು ಅಗಲ ಇರಬೇಕು. ಇದಕ್ಕಾಗಿ ದಿವ್ಯಶ್ರೀ ಅಪಾರ್ಟ್ ಮೆಂಟ್ ಬಳಿ ರಾಜಕಾಲುವೆ ಅಗಲ ಅಳತೆಗೆ ಆದೇಶ ನೀಡಿದ್ದೇನೆ ಎಂದು ಅವರು ಹೇಳಿದರು.
ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಇನ್ನು ಮುಂದೆ ನೊಟೀಸ್ ನೀಡುವುದಿಲ್ಲ. ಬಾಯಿ ಮಾತಲ್ಲಿ ಹೇಳುತ್ತೇವೆ. ಕೇಳದಿದ್ದರೆ ನಂತರ ಕಾನೂನು ಬಳಸಿ ನಮ್ಮ ಕೆಲಸ ಮಾಡುತ್ತೇವೆ. ಒಂದೇ ದಿನದಲ್ಲಿ ಬದಲಾವಣೆ ಮಾಡುತ್ತೇನೆ ಎಂದು ಹೇಳುವುದಿಲ್ಲ. ಆದರೆ ತಕ್ಷಣದಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕೆಲವು ಸೂಚನೆ ನೀಡಿದ್ದೇನೆ. ಈ ಭೇಟಿ ವೇಳೆ ಕೆಲವು ತಾಂತ್ರಿಕ ವಿಚಾರಗಳನ್ನು ಗಮನಿಸಿದ್ದೇನೆ ಎಂದರು.
‘ನಗರದಲ್ಲಿ 859 ಕಿ.ಮೀ ಪ್ರಾಥಮಿಕ ಹಾಗೂ ದ್ವಿತೀಯ ಕಾಲುವೆಗಳಿವೆ. ಆ ಪೈಕಿ 491 ಕಿ.ಮೀ.ನಷ್ಟು ಕಾಲುವೆ ಕಾಮಗಾರಿ ಆರಂಭವಾಗಿದೆ. 195 ಕಿ.ಮೀ.ನಷ್ಟು ಕಾಲುವೆ ಕಾಮಗಾರಿ 2022-23ನೆ ಸಾಲಿನಲ್ಲಿ ಗುರುತಿಸಿದ್ದಾರೆ. 173 ಕಿ.ಮೀ.ನಷ್ಟು ಕಾಲುವೆ ಕಾಮಗಾರಿ ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಮಳೆ ನೀರಿನಿಂದ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಬೆಸ್ಕಾಂ, ಬಿಡಬ್ಲ್ಯೂಎಸ್‍ಎಸ್‍ಬಿ, ಬಿಡಿಎ ಹಾಗೂ ಬಿಬಿಎಂಪಿ ಒಟ್ಟಾಗಿ ಕೆಲಸ ಮಾಡಬೇಕು. ಕಾಮಗಾರಿಗಳ ಪ್ರಗತಿಯೇ ಬೆಂಗಳೂರಿನ ಅಭಿವೃದ್ಧಿ’
-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ