ಯುವತಿಯ ಅತ್ಯಾಚಾರ ಆರೋಪ: ಇಬ್ಬರ ಬಂಧನ
ಬೆಂಗಳೂರು, ಜೂ.8: ಯುವತಿ ಮೇಲೆ ಅತ್ಯಾಚಾರ ವೆಸಗಿದ ಆರೋಪದಡಿ ಇಬ್ಬರನ್ನು ಇಲ್ಲಿನ ಗಿರಿನಗರ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ತುಮಕೂರಿನ ಕೊರಟಗೆರೆ ಮೂಲದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪುರುಷೋತ್ತಮ್ ಹಾಗೂ ಆತನ ಸ್ನೇಹಿತ ಚೇತನ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತುಮಕೂರು ಮೂಲದ ಪುರುಷೋತ್ತಮ್ , ರಾಪಿಡೋ ಕಂಪೆನಿಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದರೆ, ಚೇತನ್ ಖಾಸಗಿ ಬ್ಯಾಂಕ್‍ನಲ್ಲಿ ಕೆಲಸಮಾಡುತ್ತಿದ್ದಾನೆ. ಇಬ್ಬರುಸ್ನೇಹಿತರಾಗಿದ್ದು, ಗಿರಿನಗರದಲ್ಲಿ ವಾಸವಾಗಿದ್ದರು. ಕಳೆದ ಸೆಪ್ಟೆಂಬರ್ ನಲ್ಲಿ ಯುವತಿಯನ್ನು ಪರಿಚಯಿಸಿಕೊಂಡಿದ್ದ ಪುರುಷೋತ್ತಮ್ ಯುವತಿ ಹಿಂದೆ ಬಿದ್ದು ತನ್ನನ್ನು ಪ್ರೀತಿಸುವಂತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಆನಂತರ, ಕಳೆದ ವಾರ ತುಮಕೂರಿಗೆ ಬಂದಿದ್ದ ಪುರುಷೋತ್ತಮ್ ಯುವತಿಯನ್ನು ಭೇಟಿಯಾಗಿದ್ದಾನೆ. ಬೆಂಗಳೂರಿಗೆ ಬರುವಾಗ ಆಕೆಯ ಮೊಬೈಲ್ ಪಡೆದುಕೊಂಡು ಬಂದಿದ್ದ. ಯುವತಿ ಕೆಲವು ದಿನಗಳ ಹಿಂದೆ ಕರೆ ಮಾಡಿ ತನ್ನ ಮೊಬೈಲ್ ವಾಪಸ್ ಕೊಡುವಂತೆ ಕೇಳಿದ್ದಾಳೆ. ಬೆಂಗಳೂರಿಗೆ ಬಂದರೆ ಮೊಬೈಲ್ ಹಿಂತಿರುಗಿಸಿ ಕೊಡುವುದಾಗಿ ಪುರುಷೋತ್ತಮ್ ಹೇಳಿದ್ದ.
ಜೂ.7ರಂದು ನಗರಕ್ಕೆ ಯುವತಿ ಬಂದಿದ್ದು, ಈ ವೇಳೆ ಚೇತನ್ ಜತೆ ಸೇರಿ ಅತ್ಯಾಚಾರವೆಸಗಿರುವುದಾಗಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ಗಿರಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.