ಮಣಿಪುರದಲ್ಲಿ ‘ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಶಿಫಾರಸ್ಸು’ ಮಾಡಲು ಕೋರಿ ರಾಷ್ಟ್ರಪತಿಗೆ ಮನವಿ
ಬೆಂಗಳೂರು, ಜೂ. 9: ‘ಕಣಿವೆ ರಾಜ್ಯ ಮಣಿಪುರದಲ್ಲಿ ಕ್ರೈಸ್ತ ಸಮುದಾಯದ ಮೇಲಿನ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಿ, ಅಲ್ಲಿ ಶಾಂತಿ ಪುನರ್ ಸ್ಥಾಪಿಸಬೇಕು. ಗಲಭೆ ಪೀಡಿತ ಮಣಿಪುರದಲ್ಲಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸ್ಸು ಮಾಡಬೇಕು’ ಎಂದು ಕೋರಿ ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಪೋರಮ್‍ನ ನಿಯೋಗ, ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.
ಶುಕ್ರವಾರ ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಖುದ್ಧು ಭೇಟಿ ಮಾಡಿದ ಫೋರಮ್‍ನ ಅಧ್ಯಕ್ಷ ಅಂಥೋಣಿ ವಿಕ್ರಮ್, ಪದಾಧಿಕಾರಿಗಳಾದ ಗೋಪಿ, ಜಾನ್ ಚಂದ್ರನ್, ರಾಬಿನ್ಸನ್, ಸ್ಟಾನಿಸ್ ರಾಜಾ ನೇತೃತ್ವದ ನಿಯೋಗ, ‘ಮಣಿಪುರದಲ್ಲಿನ ದುಷ್ಕರ್ಮಿಗಳ ದಾಳಿಯಿಂದ ಹಾನಿಗೊಳಗಾದ ಮನೆಗಳು ಮತ್ತು ಚರ್ಚ್‍ಗಳನ್ನು ಮರುನಿರ್ಮಾಣ ಮಾಡಬೇಕು. ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದೆ.
‘ದಾಳಿಯಲ್ಲಿ ಕುಟುಂಬದ ಅನ್ನದಾತರನ್ನು ಕಳೆದುಕೊಂಡವರಿಗೆ ಸರಕಾರಿ ಉದ್ಯೋಗ ನೀಡಬೇಕು. ಗಲಭೆ ಹಿನ್ನೆಲೆಯಲ್ಲಿ ವ್ಯಾಪಾರ ನಷ್ಟಕ್ಕೆ ಒಳಗಾದ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು. ಕ್ರೈಸ್ತ ಸಮುದಾಯದ ಸುರಕ್ಷತೆಯನ್ನು ಖಾತರಿಪಡಿಸಬೇಕು. ಅಲ್ಲದೆ, ಗಲಭೆಗೆ ಕುಮ್ಮಕ್ಕು ನೀಡಿದ ಮತ್ತು ಘಟನೆಗೆ ಕಾರಣರಾದ ಎಲ್ಲ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ನಿಯೋಗ ಒತ್ತಾಯಿಸಿದೆ.