'ಶಕ್ತಿ' ಯೋಜನೆಯ ಸ್ಮಾರ್ಟ್‍ಕಾರ್ಡ್ ಮಾಡಿಸಿಕೊಳ್ಳಲು 3 ತಿಂಗಳ ಕಾಲಾವಕಾಶ: ಸಚಿವ ರಾಮಲಿಂಗಾರೆಡ್ಡಿ
''ಗುರುತಿನ ಚೀಟಿ ಇದ್ದರೆ ನಾಳೆಯಿಂದಲೇ ಉಚಿತ ಬಸ್ ಪ್ರಯಾಣ''
ಬೆಂಗಳೂರು, ಜೂ. 10: ‘ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲ ಮಹಿಳೆಯರಿಗೆ ಸಾರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ ಯೋಜನೆ’ಗೆ ನಾಳೆ(ಜೂ.11)ಚಾಲನೆ ನೀಡಲಾಗುವುದು. ಈ ಯೋಜನೆ ಎಲ್ಲ ಮಹಿಳೆಯರಿಗೆ ಅನ್ವಯವಾಗಲಿದ್ದು, ಸ್ಮಾರ್ಟ್‍ಕಾರ್ಡ್ ಮಾಡಿಸಿಕೊಳ್ಳಲು 3 ತಿಂಗಳ ಕಾಲಾವಕಾಶವಿದೆ. ಗುರುತಿನ ಚೀಟಿ ಇದ್ದರೆ ಮಹಿಳೆಯರಿಗೆ ನಾಳೆಯಿಂದಲೇ ಉಚಿತ ಬಸ್ ಪ್ರಯಾಣ ಮಾಡಬಹುದು' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿನ ಮೆಜೆಸ್ಟಿಕ್‍ನಿಂದ ವಿಧಾನಸೌಧ ಮಾರ್ಗದ ಬಸ್‍ನಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸಿ ಸಾಂಕೇತಿಕವಾಗಿ ಮಹಿಳೆಯರಿಗೆ ಸ್ಮಾರ್ಟ್‍ಕಾರ್ಡ್ ವಿತರಣೆ ಮಾಡುವುದರೊಂದಿಗೆ ಯೋಜನೆಗೆ ಹಸಿರು ನಿಶಾನೆ ತೋರಿಸಿಲಿದ್ದಾರೆ. ನಂತರ ವಿಧಾನಸೌಧದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಕ್ತಿ ಯೋಜನೆಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ’ ಎಂದು ಹೇಳಿದರು.
ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್‍ಗಳಲ್ಲಿ ನಾಳೆ ಮಧ್ಯಾಹ್ನದಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ. ಈ ಸೌಲಭ್ಯವನ್ನು ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಿ, ಗುರುತಿನ ಚೀಟಿ ಪಡೆದುಕೊಳ್ಳಬೇಕಾಗಿದೆ. ಈ ಯೋಜನೆಯಡಿ ಮಹಿಳಾ ಪ್ರಯಾಣಿಕರು ರಾಜ್ಯದಲ್ಲಿ ಉಚಿತವಾಗಿ ಸಂಚರಿಸಬಹುದು. ಹೊರ ರಾಜ್ಯ ಸಂಚಾರಕ್ಕೆ ಈ ಯೋಜನೆ ಅನ್ವಯವಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲು ನಿರ್ವಾಹಕರಾಗುವುದಿಲ್ಲ. ಬಸ್‍ಗಳಲ್ಲಿ ಟಿಕೆಟ್ ನೀಡಲು ನಿರ್ವಾಹಕರು ಇರುತ್ತಾರೆ. ಸಿದ್ದರಾಮಯ್ಯನವರು ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಣೆ ನೀಡಿದರು.