ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಇದುವರೆಗೆ 38 ಮಂದಿ ಸಾವು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ BMRCL:ವರದಿ

Update: 2023-06-11 15:21 GMT

ಬೆಂಗಳೂರು: ನಮ್ಮ ಮೆಟ್ರೋ ನಿರ್ಮಾಣ ಕಾಮಗಾರಿಯಲ್ಲಿ ಇಲ್ಲಿಯವರೆಗೆ 38 ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಆದರೆ ಇದುವರೆಗೂ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನ ಯಾವುದೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬ ಆಘಾತಕಾರಿ ಅಂಶವನ್ನು ಆರ್‌ಟಿಐ ವರದಿ ಬಹಿರಂಗಪಡಿಸಿದೆ ಎಂದು deccanherald.com ವರದಿ ಮಾಡಿದೆ.

ಆರ್‌ಟಿಐ ವರದಿಯು, ಮೆಟ್ರೋ ನಿರ್ಮಾಣ ಸೈಟ್‌ಗಳಲ್ಲಿ ಅಸಮರ್ಪಕ ಸುರಕ್ಷತಾ ಮೂಲಸೌಕರ್ಯದ ಕಡೆಗೆ ಬೊಟ್ಟು ಮಾಡಿದೆ ಮಾತ್ರವಲ್ಲ, ಅನಾಹುತಗಳಿಗೆ ಅಧಿಕೃತ ಹೊಣೆಗಾರಿಕೆಯ ಗಂಭೀರ ಕೊರತೆಯನ್ನು ಸಹ ಬಹಿರಂಗಪಡಿಸಿದೆ.

2007 ರಲ್ಲಿ ಪ್ರಾರಂಭವಾದ ಮೆಟ್ರೋ ನಿರ್ಮಾಣ ಕಾಮಗಾರಿಯಲ್ಲಿ 38 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ ಎಂದು ದಾಖಲೆಗಳು ತೋರಿಸಿವೆ.

2023 ರ ಜನವರಿಯಲ್ಲಿ ನಡೆದ ಅಪಘಾತವನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಪಘಾತಗಳಿಗೆ ಗುತ್ತಿಗೆ ಕಾರ್ಮಿಕರೇ ಕಾರಣ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.  ಇವರಲ್ಲಿ ಸಹಾಯಕರು, ಫಿಟ್ಟರ್‌ಗಳು, ಚಾಲಕರು, ರಿಗ್ಗರ್‌ಗಳು ಮತ್ತು ಗುತ್ತಿಗೆದಾರರಿಂದ ಕೆಲಸ ಮಾಡುವ ಕೌಶಲ್ಯರಹಿತ ಕಾರ್ಮಿಕರು ಸೇರಿದ್ದಾರೆ.

RTI ಅರ್ಜಿಗೆ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ, ರೀಚ್ 2 ವಿಸ್ತರಣೆಯಲ್ಲಿ (ಪರ್ಪಲ್ ಲೈನ್‌ನ ಪಶ್ಚಿಮ ಭಾಗ) ಕೇವಲ ಎರಡು ಸಾವುಗಳು ಸಂಭವಿಸಿವೆ ಎಂದು ಬಿಎಂಆರ್‌ಸಿಎಲ್ ಹೇಳಿಕೊಂಡಿತ್ತು. ಅಲ್ಲದೆ, ನಿರ್ಮಾಣದ ಸಮಯದಲ್ಲಿ ಯಾವುದೇ ಸಾರ್ವಜನಿಕರು ಗಾಯಗೊಂಡಿಲ್ಲ ಅಥವಾ ಸಾವನ್ನಪ್ಪಿಲ್ಲ ಎಂದು ಹೇಳಿತ್ತು. ಆದಾಗ್ಯೂ, ನಂತರದ ಮನವಿಗೆ ಏಳು ಮಂದಿ ಮೃತಪಟ್ಟಿರುವ ವಿವರ ನೀಡಿದೆ. ಇದರಲ್ಲಿ ಇಬ್ಬರು ಸಾರ್ವಜನಿಕರಾದ ಸುಶೀಲ್ ಕಾಂಚನ್, ಆನಂದಪ್ಪ ಸೇರಿದಂತೆ ಒಟ್ಟು ಏಳು ಜನರ ವಿವರಗಳನ್ನು ಒದಗಿಸಿದೆ. ಆ ಮೂಲಕ ಒಟ್ಟು 9 ಸಾವುಗಳನ್ನು ಪಟ್ಟಿ ಮಾಡಿದೆ. ಇತರ 29 ಮಂದಿಯ ಸಾವಿಗೆ ಸಂಬಂಧಿಸಿದಂತೆ BMRCL ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ವರದಿಯಾಗಿದೆ.

ಗಮನಿಸಬೇಕಾದ ಸಂಗತಿಯೆಂದರೆ, ಅಪಘಾತಗಳ ಕಾರಣದ ಅಧ್ಯಯನದಲ್ಲಿ ಸುರಕ್ಷತೆ ಕ್ರಮ ಪಾಲಿಸದ ತನ್ನ ಅಧಿಕಾರಿಗಳ ವಿರುದ್ಧ ಬಿಎಂಆರ್‌ಸಿಎಲ್‌ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ, ಪಟ್ಟಿ ಮಾಡಲಾದ ಎಲ್ಲಾ ಪ್ರಕರಣಗಳಲ್ಲಿ, ಕಾರ್ಮಿಕರ ನಿರ್ಲಕ್ಷ್ಯ ಅಥವಾ ಗುತ್ತಿಗೆದಾರರು ಕೆಲಸ ಪ್ರಾರಂಭಿಸುವ ಮೊದಲು ಅಧಿಕಾರಿಗಳಿಗೆ ತಿಳಿಸಲು ವಿಫಲವಾದ ಕಾರಣಗಳನ್ನು ಅಪಘಾತಗಳಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.  ಪಟ್ಟಿ ಮಾಡಲಾದ ಒಂಬತ್ತು ಪ್ರಕರಣಗಳಲ್ಲಿ ಐದರಲ್ಲಿ ಗುತ್ತಿಗೆದಾರರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ.

ಜನವರಿಯಲ್ಲಿ ಎಚ್‌ಬಿಆರ್ ಲೇಔಟ್‌ನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣದಲ್ಲಿ, ಬಿಎಂಆರ್‌ಸಿಎಲ್ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ, ಗುತ್ತಿಗೆದಾರರಿಗೆ 15 ಲಕ್ಷ ರೂಪಾಯಿ ದಂಡ ವಿಧಿಸಿ ಅವರಿಂದ ಕಾರಣ ಕೇಳಿದೆ.

ಇದುವರೆಗೆ ಗುತ್ತಿಗೆದಾರರು ಸಂತ್ರಸ್ತರ ಕುಟುಂಬಗಳಿಗೆ 3.15 ಕೋಟಿ ರೂಪಾಯಿ ಪರಿಹಾರ ನೀಡಿದ್ದರೆ, ಬಿಎಂಆರ್‌ಸಿಎಲ್ ಗುತ್ತಿಗೆದಾರರಿಂದ 1.77 ಕೋಟಿ ರೂಪಾಯಿವರೆಗೆ ದಂಡ ವಿಧಿಸಿದೆ.

Similar News