ಬೆಂಗಳೂರು | ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆ: ಯುವಕ-ಯುವತಿ ಮೃತ್ಯು

Update: 2023-06-12 06:16 GMT

ಬೆಂಗಳೂರು, ಜೂ.12: ಬಾತ್ ರೂಮ್ ನಲ್ಲಿ ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಯುವಕ-ಯುವತಿ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಚಿಕ್ಕಜಾಲದ ತರಬನಹಳ್ಳಿ ಎಂಬಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗುಂಡ್ಲುಪೇಟೆ ಮೂಲದ ಯುವಕ ಚಂದ್ರಶೇಖರ್ ಹಾಗೂ ಗೋಕಾಕ್​​ನ ಯುವತಿ ಸುಧಾರಾಣಿ ಮೃತಪಟ್ಟವರು ಎಂದು ತಿಳಿದುಬಂದಿದೆ. ಇವರು ಪ್ರೇಮಿಗಳಾಗಿದ್ದರು. ಚಂದ್ರಶೇಖರ್ ತರಬನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಜೂ.10ರಂದು ಸಂಜೆ ಈ ಮನೆಗೆ ಸುಧಾರಾಣಿ ಆಗಮಿಸಿದ್ದರು. ರಾತ್ರಿ ಇವರಿಬ್ಬರು ಸ್ನಾನಕ್ಕೆಂದು ಗ್ಯಾಸ್​ ಗೀಸರ್​ ಆನ್ ಮಾಡಿ ಬಾತ್​ರೂಮ್​ಗೆ ಹೋಗಿದ್ದಾರೆ. ಈ  ವೇಳೆ ಗ್ಯಾಸ್​ ಗೀಸರ್​ನಿಂದ ವಿಷಾನಿಲ ಸೋರಿಕೆಯಾಗಿದ್ದರಿಂದ ಇಬ್ಬರೂ ಬಾತ್​ರೂಮ್​ನ್ಲಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರವಿವಾರ ಬೆಳಗ್ಗೆ ಚಂದ್ರಶೇಖರ್ ಮನೆಯಿಂದ ಹೊರಗೆ ಬಾರದೆ ಇದ್ದಾಗ ಅನುಮಾನಗೊಂಡ ಮನೆ ಮಾಲಕ ಪರಿಶೀಲಿಸಿದಾಗ ದುರಂತ ಬೆಳಕಿಗೆ ಬಂದಿದೆ.

ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಶೇಖರ್ ಹಾಗೂ ಸುಧಾರಾಣಿ ಅವರು ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದವರು,  ಶೀಘ್ರದಲ್ಲೇ ಮದುವೆಯಾಗಲು ಉದ್ದೇಶಿಸಿದ್ದರು ತಿಳಿದುಬಂದಿದೆ.

Similar News