ಕಲುಷಿತ ನೀರು ಸೇವನೆಯಿಂದಾಗಿರುವ ದುರಂತದ ತನಿಖೆಗೆ ಸಿದ್ದರಾಮಯ್ಯ ಆದೇಶ

ದುರಂತ ಮರುಕಳಿಸಿದರೆ ಜಿಪಂ ಸಿಇಒ ಅಮಾನತು: ಮುಖ್ಯಮಂತ್ರಿ ಎಚ್ಚರಿಕೆ

Update: 2023-06-12 07:26 GMT

ಬೆಂಗಳೂರು, ಜೂ.12: ಕೊಪ್ಪಳ ಜಿಲ್ಲೆ ಸೇರಿ ಎಲ್ಲೆಲ್ಲಿ ಕಲುಷಿತ ನೀರು ಕುಡಿದು ಜನರ ಆರೋಗ್ಯ ಮತ್ತು ಜೀವಕ್ಕೆ ಸಮಸ್ಯೆ ಆಗಿದೆಯೊ ಆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಕಲುಷಿತ ನೀರು ಸೇವಿಸಿ ಸಾವಿಗೀಡಾದ ಪ್ರಕರಣ ಸಂಭವಿಸಿದರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಹೊಣೆ ಮಾಡಿ, ಅವರನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಮುಖ್ಯಮಂತ್ರಿ, ಈ ಮೊದಲು ಕಲುಷಿತ ನೀರು ಸೇವಿಸಿ ಅನಾಹುತ ಸಂಭವಿಸಿದಾಗಲೇ ಏಕೆ ಎಚ್ಚೆತ್ತುಕೊಳ್ಳಲಿಲ್ಲ ? ಮತ್ತೆ ಘಟನೆ ಮರುಕಳಿಸಿದೆ. ನೀವು ಏನ್ ಮಾಡ್ತಾ ಇದೀರಿ? ಕಚೇರಿಯಲ್ಲಿ ಕುಳಿತು ಕೆಲಸ ಮಾಡಬಾರದು. ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಅಧ್ಯಯನ ನಡೆಸಿ ಮತ್ತೆ ಕಲುಷಿತ ನೀರಿನ ಅನಾಹುತ ಆಗಬಾರದು. ಮತ್ತೆ ಮರುಕಳಿಸಿದರೆ ನೀವೇ ಹೊಣೆ ಆಗುತ್ತೀರಿ. ಕ್ರಮ ಎದುರಿಸಬೇಕಾಗುತ್ತದೆ ಎಂದು  ಎಚ್ಚರಿಸಿದರು.

ಕೊಪ್ಪಳ ಜಿಲ್ಲೆ ಸೇರಿ ಎಲ್ಲೆಲ್ಲಿ ಕಲುಷಿತ ನೀರು ಕುಡಿದು ಜನರ ಆರೋಗ್ಯ ಮತ್ತು ಜೀವಕ್ಕೆ ಸಮಸ್ಯೆ ಆಗಿರುವ ಬಗ್ಗೆ ಈಗಾಗಲೇ ಸ್ಥಳೀಯವಾಗಿ ತನಿಖೆ ನಡೆಯುತ್ತಿದೆ. ಬೆಂಗಳೂರು ಕೇಂದ್ರದಿಂದಲೂ ತಂಡವನ್ನು ಕಳುಹಿಸಿ ತನಿಖೆ ನಡೆಸಲಾಗುವುದು. ಎರಡೂ ವರದಿಗಳು ಬಂದ ಬಳಿಕ ತಪ್ಪಿತಸ್ಥರನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಕಾರ್ಯದರ್ಶಿ  ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

Similar News