ಶಕ್ತಿ ಯೋಜನೆ | ರವಿವಾರ ಒಂದೇ ದಿನ 5.71 ಲಕ್ಷ ಮಹಿಳೆಯರ ಪ್ರಯಾಣ; ಸರ್ಕಾರಕ್ಕಾದ ಖರ್ಚೆಷ್ಟು?

Update: 2023-06-12 16:03 GMT

ಬೆಂಗಳೂರು, ಜೂ. 12: ಸರಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ ಜಾರಿಯಾದ ಎರಡನೆ ದಿನವೂ ರಾಜ್ಯದೆಲ್ಲೆಡೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್‍ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಅತ್ಯಂತ ಸಂತೋಷದಿಂದಲೇ ಉಚಿತ ಪ್ರಯಾಣ ಬೆಳೆಸಿ ಖುಷಿಪಟ್ಟರು.

‘ಶಕ್ತಿ ಯೋಜನೆ’ಯಡಿ ನಿನ್ನೆ ಮಧ್ಯಾಹ್ನ 1ಗಂಟೆಯಿಂದ ಮಧ್ಯರಾತ್ರಿ 12ಗಂಟೆಯ ವರೆಗೆ ರಾಜ್ಯದಲ್ಲಿ ಒಟ್ಟಾರೆ 5.71 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ನಾಲ್ಕೂ ನಿಗಮಗಳು ಒಟ್ಟು 1.40 ಕೋಟಿ ರೂ.ಗಳಷ್ಟು ಮೊತ್ತದಷ್ಟು ವೆಚ್ಚವಾಗಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.

ಕೆಎಸ್ಸಾರ್ಟಿಸಿ-1.93ಲಕ್ಷ ಮಹಿಳೆಯರು, 58.16 ಲಕ್ಷ ರೂ., ಬಿಎಂಟಿಸಿ-2.01ಲಕ್ಷ ಮಹಿಳೆಯರು, 26.19ಲಕ್ಷ ರೂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ-1.22ಲಕ್ಷ ಮಹಿಳೆಯರು, 36.17 ಲಕ್ಷ ರೂ. ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ-53 ಸಾವಿರ ಮಹಿಳೆಯರು, 19.70ಲಕ್ಷ ರೂ.ಗಳು ಸೇರಿದಂತೆ ಒಟ್ಟು 5.17ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು, ಒಟ್ಟು 1.40 ಕೋಟಿ ರೂ.ಮೌಲ್ಯವಾಗುತ್ತದೆ ಎಂದು ಸಾರಿಗೆ ಸಂಸ್ಥೆ ಅಂಕಿ-ಅಂಶಗಳನ್ನು ನೀಡಿದೆ.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು, ಉಚಿತ ಪ್ರಯಾಣಕ್ಕೆ ಮಹಿಳೆಯರು ಮುಗಿಬಿದ್ದಿದ್ದಾರೆ. ಸೋಮವಾರ ಮುಂಜಾನೆಯಿಂದಲೇ ರಾಜ್ಯಾದ್ಯಂತ ಸರಕಾರಿ ಬಸ್‍ಗಳಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗಿದ್ದು, ಆಧಾರ್ ಕಾರ್ಡ್ ಸೇರಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೆಟ್ ನೀಡಲಾಗುತ್ತಿದೆ.

ಮಹಿಳಾ ಪ್ರಯಾಣಿಕರ ಸಂಚಾರದ ಪ್ರಮಾಣದಲ್ಲಿ ಶೇ.15ರಷ್ಟು ಏರಿಕೆಯಾಗಿದ್ದು, ಉದ್ಯೋಗ, ಕೂಲಿಗಾಗಿ ಹಾಗೂ ಸಿದ್ದು ಉಡುಪು ಕಾರ್ಖಾನೆಗೆ ತೆರಳುವ ಮಹಿಳೆಯರು ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ಕಂಡು ಬಂತು. ಮತ್ತೊಂದೆಡೆ ಉಚಿತ ಬಸ್ ಪ್ರಯಾಣ ಆರಂಭವಾಗಿದ್ದರಿಂದ ಧರ್ಮಸ್ಥಳ ಸೇರಿದಂತೆ ಧಾರ್ಮಿಕ್ಷ ಕೇತ್ರಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ತೆರಳುತ್ತಿದ್ದಾರೆ. 

ಉಚಿತ ಪ್ರಯಾಣಕ್ಕೆ ಸರಕಾರ ಅನುಕೂಲ ಕಲ್ಪಿಸಿರುವ ಹಿನ್ನೆಲೆಯಲ್ಲಿ ಹೆಂಗಳೆಯರು ಆಟೋರಿಕ್ಷಾ, ಕಾರು, ಕ್ಯಾಬ್, ದ್ವಿಚಕ್ರ ವಾಹನ, ಮೆಟ್ರೋ ಬಿಟ್ಟು ಸಾರಿಗೆ ಬಸ್‍ಗಳ ಮೊರೆ ಹೋಗಿದ್ದು, ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಗೆ ಮಹಿಳೆಯರು ಸೇರಿದಂತೆ ರಾಜ್ಯದ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಿಲ್ದಾಣಗಳಲ್ಲಿ ‘ಇನ್ನೇನು ನಮಗೆಲ್ಲ ಎಲ್ಲೇ ಹೋದರೂ ಫ್ರೀ ಅಲ್ವಾ..’ ಎಂಬ ಮಾತುಗಳ ಸಾಮಾನ್ಯವಾಗಿ ಕೇಳಿಬರುತ್ತಿತ್ತು.

ನಕಲು ಪ್ರತಿ ಮಾನ್ಯ: ‘ಶಕ್ತಿ’ ಯೋಜನೆಯಡಿ ಕೆಎಸ್ಸಾರ್ಟಿಸಿ ಸೇರಿದಂತೆ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸಲು ವಿದ್ಯಾರ್ಥಿನಿಯರು-ಮಹಿಳೆಯರು ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ಚೀಟಿಯ ಮೂಲ/ನಕಲು/ಡಿಜಿಲಾಕರ್(ಹಾರ್ಡ್ ಮತ್ತು ಸಾಫ್ಟ್ ಕಾಪಿ) ಮಾದರಿಯನ್ನು ಹಾಜರುಪಡಿಸಿ ಉಚಿತ ಟಿಕೆಟ್ ಪಡೆದು ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸಬಹುದು’ ಎಂದು ಕೆಎಸ್ಸಾರ್ಟಿಸಿ ಪ್ರಕಟನೆ ತಿಳಿಸಿದೆ.

Similar News