‘ಸರ್ವಾಧಿಕಾರ ಧೋರಣೆ’ಯ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅಕ್ರಮಗಳ ತನಿಖೆ ನಡೆಸಿ: ಸಮಾನ ಮನಸ್ಕರ ವೇದಿಕೆ ಒತ್ತಾಯ

Update: 2023-06-12 14:58 GMT

ಬೆಂಗಳೂರು, ಜೂ. 11: ‘ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದ್ದು, ಅವರ ಕಾಲವಧಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಸರಕಾರವು ತನಿಖೆಯನ್ನು ನಡೆಸಬೇಕು’ ಎಂದು ಸಮಾನ ಮನಸ್ಕರ ವೇದಿಕೆ ಒತ್ತಾಯಿಸಿದೆ.

ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಮಾನ ಮನಸ್ಕರ ವೇದಿಕೆಯ ಸದಸ್ಯರು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ದುರಾಡಳಿತವನ್ನು ಖಂಡಿಸಿ ನಡೆದ ಪ್ರತಿಭಟನೆ ನಡೆಸಿದರು. ಜೋಶಿ ಕಸಾಪದ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ಮೇಲೆ ಪರಿಷತ್ತು ಒಂದು ಅಧಿಕಾರಿಶಾಹಿ ಸಂಸ್ಥೆಯಾಗಿ ರೂಪಾಂತರ ಗೊಳ್ಳುತ್ತಿದೆ. ಕವಿಗಳು, ಲೇಖಕರು, ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳಿಂದ ದೂರವಾಗುತ್ತಿದೆ. ಇದರಿಂದ ಕನ್ನಡ ಸಾರಸ್ವತ ಲೋಕಕ್ಕೂ, ಸಾಹಿತ್ಯಾಭಿಮಾನಿಗಳಿಗೆ ನಿರಾಶೆ ಉಂಟಾಗಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಜೋಶಿ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಕಸಾಪದ ಸಭಾಂಗಣದ ಹೆಸರನ್ನು ವಿರೂಪಗೊಳಿಸಿ, ನವೀಕರಣದ ಹೆಸರಿನಲ್ಲಿ ಬಾಡಿಗೆಯನ್ನು ಹೆಚ್ಚಳ ಮಾಡಲಾಯಿತು. ಇದರಿಂದ ಕನ್ನಡ ಸಂಘ-ಸಂಸ್ಥೆಗಳು ಕಾರ್ಯಕ್ರಮವನ್ನು ಮಾಡಲು ಕಷ್ಟವಾಗುತ್ತಿದೆ. ಪರಿಷತ್ತಿನ ಕೇಂದ್ರ ಕಚೇರಿಯ ಮುಖ್ಯದ್ವಾರದಲ್ಲಿ ಅಳವಡಿಸಲಾಗಿದ್ದ ‘ಮನುಷ್ಯ ಜಾತಿ ತಾನೊಂದೇ ವಲಂ’ ನಾಮಫಲಕವನ್ನು ತೆಗೆದು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸಾಪ ಸಭಾಂಗಣ, ಆಡಳಿತ ಕಚೇರಿ ಹಾಗೂ ಮುದ್ರಣಾಲಯ ಕಟ್ಟಡಗಳಿಗೆ ಕಾಮಗಾಎರಿ ಕೆಲಸ ನಡೆದಿದ್ದು, ಅದರ ಪೂರ್ಣ ಹಣಕಾಸಿನ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಸ್ಥಗಿತಗೊಳಿಸಲಾದ ಮಹನೀಯರ ದತ್ತಿ ಪ್ರಶಸ್ತಿಗಳನ್ನು ಪುನಾಃ ನೀಡಬೇಕು. ಕನ್ನಡ ನುಡಿ ಪತ್ರಿಕೆಯನ್ನು ಆರಂಭಿಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು. 

ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಲೇಖಕಿ ಬಿ.ಟಿ.ಲಲಿತಾ ನಾಯ್ಕ್, ಜಾಣಗೆರೆ ವೆಂಕಟರಾಮಯ್ಯ, ಡಾ.ವಸುಂಧರಾ ಭೂಪತಿ, ಎಲ್.ಎನ್.ಮುಕುಂದರಾಜ್, ಎಲ್.ಶಿವಶಂಕರ್, ವಡ್ಡಗೆರೆ ನಾಗರಾಜಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News