ಅಲೆಮಾರಿಗಳಿಗೆ ಪ್ರತ್ಯೇಕ ಆಯೋಗ ರಚಿಸಲು ಮನವಿ; ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ

Update: 2023-06-12 15:05 GMT

ಬೆಂಗಳೂರು, ಜೂ. 12: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ  ಅಲೆಮಾರಿ ಬುಡಕಟ್ಟುಗಳ ಮಹಾಸಭಾದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ನೇತೃತ್ವದಲ್ಲಿ ಅಲೆಮಾರಿ ಸಮುದಾಯಗಳ ನಿಯೋಗವು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಚರ್ಚಿಸಿತು.  

ಈ ಸಂದರ್ಭದಲ್ಲಿ ಎಲ್ಲ ಅಲೆಮಾರಿ ಸಮುದಾಯಗಳ ಸಂಕಷ್ಟಗಳನ್ನು ಆಲಿಸಿದ ಮುಖ್ಯಮಂತ್ರಿ, ಅಲೆಮಾರಿಗಳಿಗೆ ಪ್ರತ್ಯೇಕ ಆಯೋಗ ಸ್ಥಾಪಿಸುವ ಕುರಿತು ಪರಿಶೀಲಿಸಲಾಗುವುದು ಎಂದರು. 

ಇಂದಿಗೂ ಹಾವಾಡಿಸುವ ಮೂಲಕ ಜೀವನ ನಡೆಸುವ ಹಾವಾಡಿಗ ಸಮುದಾಯದವರಿಗೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಂತೆ ಕಿವಿ ಮಾತು ಹೇಳಿದ ಮುಖ್ಯಮಂತ್ರಿ, ಜುಲೈ ಒಂದರಿಂದ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ದೊರೆಯಲಿದೆ. ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಅಲ್ಲದೆ, ನಿಯೋಗದ ಇನ್ನಿತರ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು. 

ಇದಕ್ಕೂ ಮುನ್ನ ಕುಮಾರಕೃಪಾ ಅತಿಥಿ ಗೃಹದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗ ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಮನವಿ ಸಲ್ಲಿಸಿ, ತಮ್ಮ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಿತು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಡಾ.ಸಿ.ಎಸ್.ದ್ವಾರಕನಾಥ್ ಅಲೆಮಾರಿ ಜನಾಂಗಕ್ಕೆ ಸೇರಿದ 93 ಸಮುದಾಯಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಈ ಸಮುದಾಯದವರನ್ನು ಗುರುತಿಸಿ ಅವರ ಸಮಸ್ಯೆ ಬಗೆಹರಿಸಿ ರಕ್ಷಣೆ ನೀಡಲು ಒಂದು ಸಮಿತಿ ರಚನೆಗೆ ಮನವಿ ಮಾಡಿದ್ದಾರೆ ಎಂದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು, ಗುರುತು ಇಲ್ಲದವರಿಗೆ ಗುರುತು ನೀಡಬೇಕು. ತುಳಿತಕ್ಕೆ ಒಳಗಾದವರನ್ನು ಗುರುತಿಸಿ ಅವರಿಗೆ  ಪ್ರೋತ್ಸಾಹ ನೀಡಬೇಕು. ಇದು ನಮ್ಮ ಪಕ್ಷದ ಸಿದ್ಧಾಂತ ಹಾಗೂ ಜವಾಬ್ದಾರಿ. ಹೀಗಾಗಿ ನಮ್ಮ ನಾಯಕರ ಜೊತೆ ಚರ್ಚೆ ಮಾಡುತ್ತೇವೆ. ನಂತರ ಸಂಬಂಧ ಪಟ್ಟ ಇಲಾಖೆ ಜೊತೆ ಚರ್ಚೆ ಮಾಡುತ್ತೇವೆ ಎಂದು ಅವರು ಹೇಳಿದರು.

ಪ್ರತ್ಯೇಕ ನಿಗಮ ಸ್ಥಾಪನೆ ಮಾಡುತ್ತೀರಾ ಎಂಬ ಪ್ರಶ್ನೆಗೆ, "ಮೊದಲು ಈ ಸಮುದಾಯದವರನ್ನು ಗುರುತಿಸಿ ಅವರ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಾಗುವುದು. ನಿಗಮ ಮಂಡಳಿ ಮಾಡಿದ ತಕ್ಷಣ ಸಮಸ್ಯೆ ನಿವಾರಣೆ ಆಗುವುದಿಲ್ಲ. ಈಗಾಗಲೆ ರಚನೆ ಆಗಿರುವ ನಿಗಮ ಮಂಡಳಿಗಳು ಎಲ್ಲಾ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಮೊದಲು ಅವರ ರಕ್ಷಣೆ ಮಾಡುವ ಕಾರ್ಯ ಆಗಬೇಕು" ಎಂದು ಉತ್ತರಿಸಿದರು.

ನಿಯೋಗದಲ್ಲಿ ಸುಡುಗಾಡು ಸಿದ್ಧರು, ದೊಂಬಿದಾಸ, ದಕ್ಕಲಿಗ, ಹಂದಿಜೋಗಿ, ಕೊಲೆಬಸವ, ಹಕ್ಕಿಪಿಕ್ಕಿ, ಕರಡಿ ಕಲಂಧರ್, ಪಿಂಜಾರ/ನದಾಫ್, ಸೋಲಿಗ, ಜೇನು ಕುರುಬ, ಗ್ಯಾರೆ, ಕೊರವ, ಬೇಡ ಗಂಪಣ, ಗೆಜ್ಜೆಗಾರ, ಬುಡ್ಗ ಜಂಗಮ, ಕಾಡುಗೊಲ್ಲ, ಹಲಾಲ್ ಖೋರ್ ಸಮುದಾಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Similar News