ಕೆಎಸ್ಸಾರ್ಟಿಸಿ ವಿದ್ಯಾರ್ಥಿ ಬಸ್ ಪಾಸುಗಳಿಗೆ ಆರ್ಜಿ ಆಹ್ವಾನ
ಬೆಂಗಳೂರು, ಜೂ.12: ಪ್ರಸಕ್ತ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿದ್ದು, ಕೆಎಸ್ಸಾರ್ಟಿಸಿ ವಿದ್ಯಾರ್ಥಿ ಬಸ್ ಪಾಸುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಹುದಾಗಿದೆ.
ವಿದ್ಯಾರ್ಥಿಗಳು ಇಂದಿನಿಂದ ://sevasindhu.karnataka.gov.inನಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ. ಆದರೆ ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರಕಾರದ ಆದೇಶದಂತೆ 30 ರೂ. ಸೇವಾ ಶುಲ್ಕವನ್ನು ಸಲ್ಲಿಸಬೇಕು.
ಈ ರೀತಿಯಾಗಿ ಸಲ್ಲಿಕೆಯಾದ ಅರ್ಜಿಯು ಅನುಮೋದನೆಯಾದ ಬಳಿಕ ವಿದ್ಯಾರ್ಥಿಗಳ ನೋದಾಯಿತ ಮೊಬೈಲ್ ಸಂಖ್ಯೆ ಪಾಸನ್ನು ಪಡೆಯಲು ಮಾಹಿತಿಯನ್ನು ಕಳುಹಿಸಲಾಗುತ್ತದೆ. ತದನಂತರ ವಿದ್ಯಾರ್ಥಿಗಳು ಆಯ್ಕೆಯಾದ ಕೌಂಟರ್‍ಗಳಿಗೆ ಹೋಗಿ, ಹಣವನ್ನು ಪಾವತಿ ಮಾಡಿ ಪಾಸನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್‍ಫೋನ್ ಸಂಖ್ಯೆ 87926 62814, 87926 62816ಗೆ ಸಂಪರ್ಕಿಸಬಹುದು ಎಂದು ಕೆಎಸ್ಸಾರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
‘ರಾಜ್ಯ ಸರಕಾರವು ರಾಜ್ಯದ ಮಹಿಳೆಯರಿಗೆ(ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿರುತ್ತದೆ. ನೆರೆ ರಾಜ್ಯದಲ್ಲಿ ವಾಸವಿದ್ದು, ರಾಜ್ಯದ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಅನ್ನು ಪಡೆಯುವ ಅಗತ್ಯವಿರುತ್ತದೆ’
ಪಾಸ್ ಶುಲ್ಕ: ‘ಪ್ರಾಥಮಿಕ ಶಾಲಾ ಮಕ್ಕಳಿಗೆ 10 ತಿಂಗಳ ಅವಧಿಗೆ ಪಾಸು ವಿತರಿಸಲಾಗುತ್ತಿದ್ದು, ಸಾಮಾನ್ಯ ವಿದ್ಯಾರ್ಥಿಗಳಿಗೆ 150 ರೂ., ಪ್ರೌಢಶಾಲಾ ಬಾಲಕರಿಗೆ 750 ರೂ., ಕಾಲೇಜು ಅಥವಾ ಡಿಪ್ಲೊಮೋ ಮಕ್ಕಳಿಗೆ 1,050, ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ 1,550ರೂ., ಸಂಜೆ ಕಾಲೇಜು, ಪಿಎಚ್‍ಡಿ ವಿದ್ಯಾರ್ಥಿಗಳಿಗೆ 1,350 ರೂ.ಗಳನ್ನು ನಿಗಧಿ ಮಾಡಲಾಗಿದೆ. ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳ ಅವಧಿಯ ಪಾಸನ್ನು ವಿತರಣೆ ಮಾಡಲಾಗುತ್ತಿದ್ದು, 1,310 ರೂ.ಗಳನ್ನು ನಿಗಧಿ ಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲ ವಿದ್ಯಾರ್ಥಿಗಳಿಗೆ 150ರೂ.ಗಳನ್ನು ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಮಾತ್ರ 160 ರೂ.ಶುಲ್ಕವನ್ನು ನಿಗಧಿ ಮಾಡಲಾಗಿದೆ.