ಅಂಗಾಂಗ ದಾನ ಮಾಡಿದ ಫರ್ದಿನ್ ಖಾನ್ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ

Update: 2023-06-13 12:47 GMT

ಬೆಂಗಳೂರು, ಜೂ.13:  ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಫರ್ದಿನ್ ಖಾನ್ ಕುಟುಂಬದ ಕಾರ್ಯವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶ್ಲಾಘಿಸಿದರು.

ನಗರದ ಫರ್ದಿನ್ ಖಾನ್ ಅವರ ನಿವಾಸಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಿಬಿಎಂಪಿ ವಿಪಕ್ಷ ಮಾಜಿ ನಾಯಕ ಅಬ್ದುಲ್ ವಾಜೀದ್ ಸೇರಿದಂತೆ ಪ್ರಮುಖರು ಭೇಟಿನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಆನಂತರ,ಫಾರ್ದಿನ್ ಖಾನ್ ಅವರ ಕುಟಂಬವನ್ನು ಸನ್ಮಾನಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, 22 ವರ್ಷದ ಫಾರ್ದಿನ್ ಖಾನ್ ಜೂನ್ 4 ರಂದು ಮದುವೆ ಸಮಾರಂಭ ಮುಗಿಸಿ ವಾಪಾಸ್ ಬರುತ್ತಿದ್ದಾಗ ತುಮಕೂರಿನ ಶಿರಾ ಬಳಿ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ, ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಫಾರ್ದಿಲ್ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.

ಜೂ.7ರ ಬೆಳಗ್ಗೆ 11.55ಕ್ಕೆ ಫಾರ್ದಿನ್ ಖಾನ್ ‘ಮೆದುಳು ನಿಷ್ಕ್ರಿಯ'ಗೊಂಡಿರುವುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು. ಆದರೆ, ಮೆದುಳು ಮಾತ್ರ ನಿಷ್ಕ್ರಿಯಗೊಂಡರೂ ಉಳಿದೆಲ್ಲಾ ಅಂಗಾಂಗಗಳು ವೆಂಟಿಲೇಟರ್ ಸಹಾಯದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ದುಃಖದ ಸನ್ನಿವೇಶದಲ್ಲಿ ಫಾರ್ದಿನ್ ಕುಟುಂಬದವರು ತಮ್ಮ ಮಗನ ದೇಹದ ಅಂಗಾಂಗಳನ್ನು ದಾನ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೂಲಕ 6 ಜನರಿಗೆ ಜೀವ ತುಂಬಿದ್ದಾರೆ ಎಂದರು. 

Similar News