ಕೋಮುವಾದ ತೊಡೆದುಹಾಕಲು ‘ಜಾತ್ಯತೀತ ಸಂಘಟನೆಯ ಸದಸ್ಯರ’ ಕಾವಲು ಸಮಿತಿ ರಚಿಸಿ: ಸಿಎಂಗೆ ಸಿಪಿಐ ನಿಯೋಗ ಮನವಿ

Update: 2023-06-13 15:06 GMT

ಬೆಂಗಳೂರು, ಜೂ. 13: ‘ರಾಜ್ಯದಲ್ಲಿ ಕೋಮುವಾದವನ್ನು ತೊಡೆದುಹಾಕಲು ಜಾತ್ಯತೀತ, ಪ್ರಜಾಸತ್ತಾತ್ಮಕ, ಎಡ ಪಕ್ಷಗಳ ಸಂಘಟನೆಯ ಸದಸ್ಯರನ್ನು ಒಳಗೊಂಡ ಕಾವಲು ಸಮಿತಿಗಳನ್ನು ಗ್ರಾಮ, ನಗರದ ವಾರ್ಡ್‍ಗಳಲ್ಲಿ ರಚಿಸಿ, ನಿರ್ದಿಷ್ಟ ಕ್ರಿಯಾ ಯೋಜನೆಯನ್ನು ರೂಪಿಸಬೇಕು’ ಎಂದು ಭಾರತ ಕಮ್ಯುನಿಷ್ಟ್ ಪಕ್ಷ(ಸಿಪಿಐ), ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ‘ಕೋಮು ಸಂಘರ್ಷಗಳನ್ನು ತಡೆಗಟ್ಟುವಲ್ಲಿ ಕಟ್ಟುನಿಟ್ಟಿನಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಕೋಮು ದ್ವೇಷಕ್ಕೆ ಬಲಿಯಾಗಿದ್ದ ಅಮಾಯಕ ಕುಟುಂಬಗಳಿಗೆ ಪರಿಹಾರ ನೀಡುವುದು. ಸಾಹಿತ್ಯ, ಸಾಂಸ್ಕøತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿರುವ ಸರಕಾರಿ, ಅರೆ ಸರಕಾರಿ ಮತ್ತು ಸರಕಾರದ ಅನುದಾನ ಪಡೆಯುವ ಸ್ವಾಯತ್ತ ಸಂಸ್ಥೆಗಳನ್ನು ಕೋಮುವಾದಿ ಶಕ್ತಿಗಳಿಂದ ಮುಕ್ತಗೊಳಿಸಬೇಕು ಎಂದು ಕೋರಿದೆ.

ರಾಜ್ಯಾದ್ಯಂತ ವಸತಿ ಮತ್ತು ನಿವೇಶನ ರಹಿತರ ಪುನರ್‍ಸಮೀಕ್ಷೆ ಕಾರ್ಯ ನಡೆಸುವುದು. ವಸತಿ ರಹಿತರಿಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವುದು. ನಿವೇಶನಕ್ಕೆ ಅಗತ್ಯವಿರುವ ಸರಕಾರಿ ಭೂಮಿಯನ್ನು ಕಾಯ್ದಿರಿಸಲು ಕಂದಾಯ ಇಲಾಖೆಗೆ ಸೂಚನೆ ನೀಡುವುದು.

ಬಿಜೆಪಿ ಸರಕಾರ ತಿದ್ದುಪಡಿ ಮಾಡಿದ್ದ ಕಾರ್ಮಿಕ ಹಾಗೂ ರೈತ-ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಅಂಗನವಾಡಿ, ಅಕ್ಷರದಾಸೋಹ ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ಗೌರವಧನದ ಹೆಚ್ಚಳ ಮಾಡಬೇಕು. ಪಠ್ಯಪುಸ್ತಕ ಪರಿಷ್ಕರಣೆಯನ್ನು ರದ್ದುಗೊಳಿಸಬೇಕು. ರಾಜ್ಯದಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು. 

‘ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ವೈಜ್ಞಾನಿಕ ಅಧ್ಯಯನ ಮಾಡಿ ಸೂಕ್ತವಾದ ಕನಿಷ್ಠ ವೇತನ ನೀಡುವುದು, ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿರುವ ತಿದ್ದುಪಡಿ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು’ ಎಂದು ಸಿಪಿಐ ಮನವಿ ಮಾಡಿದೆ.

ನಿಯೋಗದಲ್ಲಿ ಹಿರಿಯ ಮುಖಂಡರಾದ ಎಚ್.ವಿ.ಅನಂತಸುಬ್ಬರಾವ್, ಡಾ.ಸಿದ್ದನಗೌಡ ಪಾಟೀಲ್, ಪಿ.ವಿ. ಲೋಕೇಶ್, ಡಿ.ಎ.ವಿಜಯಭಾಸ್ಕರ್, ಬಿ.ಅಮ್ಜದ್, ಶಿವರಾಜ್ ಬಿರಾದಾರ್, ಜ್ಯೋತಿ ಎ., ಎಚ್.ಎಂ. ಸಂತೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News