ಎನ್‍ಪಿಎಸ್ ಯೋಜನೆ ರದ್ದುಗೊಳಿಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2023-06-13 15:23 GMT

ಬೆಂಗಳೂರು, ಜೂ. 13: ‘ಹಳೇ ಪಿಂಚಣಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಜೆಟ್‍ನಲ್ಲಿ ಘೋಷಿಸುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕೋರಿ  ಕರ್ನಾಟಕ ರಾಜ್ಯ ಸರಕಾರಿ ಎನ್‍ಪಿಎಸ್ ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ನೌಕರರು ಕೆಲಸ ಮಾಡಬೇಕು. ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದು ಹೇಳಿದರು.  

ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ‘2006ರಲ್ಲಿ ಎನ್‍ಪಿಎಸ್ ಜಾರಿಯಾಗಿದೆ. 2.98ಲಕ್ಷ ನೌಕರರು ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಪಿಂಚಣಿ ಮೊತ್ತವನ್ನು ಎನ್‍ಎಸ್‍ಡಿಎಲ್‍ನಲ್ಲಿ ಠೇವಣಿ ಇಡಲಾಗಿದೆ. ಈ ಮೊತ್ತ ಬಳಕೆ ಮಾಡಿ ಇವರು ನಿವೃತ್ತಿಯಾಗುವ ವೇಳೆಗೆ ಲಭ್ಯವಾಗುವಂತೆ ಜಿಪಿಎಫ್‍ನಲ್ಲಿ ಇಡಬಹುದು. ವೋಟ್ ಫಾರ್ ಒಪಿಎಸ್‍ನಲ್ಲಿ ಭಾಗಿಯಾದವರ ಮೇಲೆ ಕೈಗೊಂಡಿರುವ ಶಿಸ್ತಿನ ಕ್ರಮ ಕೈಬಿಡುವ ಕುರಿತು ಸರಕಾರ ತೀರ್ಮಾನಿಸಬೇಕು’ ಎಂದು ವಿವರಿಸಿದರು. 

ರಾಜಾಸ್ತಾನ, ಛತ್ತೀಸ್ ಗಡದಲ್ಲಿ ಎನ್‍ಪಿಎಸ್ ರದ್ದಾಗಿದ್ದು, ಕರ್ನಾಟಕದಲ್ಲಿಯೂ ಅದನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಎನ್‍ಪಿಎಸ್ ರದ್ದು ಮಾಡುವುದರಿಂದ ಯೋಜನೆಯಡಿ ಲಭ್ಯವಿರುವ ಒಟ್ಟು 19ಸಾವಿರ ಕೋಟಿ ರೂ.ಹಣವನ್ನು ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ದೊರೆಯಲಿದೆ.

ನೌಕರರ ಪಾಲಿನ 9 ಸಾವಿರ ಕೋಟಿ ಜಿಪಿಎಫ್‍ಗೆ ಪರಿವರ್ತನೆ ಮಾಡಿಕೊಳ್ಳಬಹುದು ಹಾಗೂ ಸರಕಾರದ 10 ಸಾವಿರ ಕೋಟಿ ರೂ.ಗಳು ಸರಕಾರದ ಪಾಲನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ರಾಜ್ಯ ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಂ ತೇಜ  ತಿಳಿಸಿದರು. 

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೆಪಿಟಿಸಿಎಲ್, ಆರೋಗ್ಯ, ಜಲಮಂಡಳಿ, ಕಂದಾಯ ಇಲಾಖೆ ನೌಕರರ ಸಂಘ ಸೇರಿದಂತೆ ಹಲವು ಸಂಘಟನೆಗಳ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Similar News