ವೈಟ್‍ಲಿಫ್ಟಿಂಗ್ ಕ್ರೀಡಾ ಪಟುವಿಗೆ ಸನ್ಮಾನ; 2.50 ಲಕ್ಷ ರೂ.ವೈಯಕ್ತಿಕ ನೆರವು ನೀಡಿದ ಝಮೀರ್ ಅಹ್ಮದ್

Update: 2023-06-13 18:15 GMT

ಬೆಂಗಳೂರು, ಜೂ.13: ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯಾ ಗೇಮ್ಸ್ ನಲ್ಲಿ ವೈಟ್ ಲಿಫ್ಟಿಂಗ್ ನಲ್ಲಿ ಮೂರು ಚಿನ್ನದ ಪದಕ ಪಡೆದಿರುವ ಖುದ್ಸಿಯಾ ನಝೀರ್ ಅವರನ್ನು ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಸನ್ಮಾನಿಸಿದರು.

ಮಂಗಳವಾರ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದ ಸಭಾಂಗಣದಲ್ಲಿ ಖುದ್ಸಿಯಾ ನಝೀರ್ ಅವರನ್ನು ಗೌರವಿಸಿ ಅಂತರ್‍ರಾಷ್ಟ್ರೀಯ ಸ್ಪರ್ಧೆಗೆ ಫಿನ್‍ಲ್ಯಾಂಡ್ ಗೆ ತೆರಳಲು ಝಮೀರ್ ಅಹ್ಮದ್ ಖಾನ್ ವೈಯಕ್ತಿಕವಾಗಿ 2.50 ಲಕ್ಷ ರೂ.ನೆರವಿನ ಚೆಕ್ ನೀಡಿದರು.

ಇಂತಹ ಕ್ರೀಡಾಪಟುಗಳಿಗೆ ನೆರವು ನೀಡಲು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಯೋಜನೆ ರೂಪಿಸಲು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಬಂಗಾರಪೇಟೆ ಮೂಲದ ಖುದ್ಸಿಯಾ ನಝೀರ್ ಕೆಎಸ್ರ್ಸಾಟಿಸಿಯಲ್ಲಿ ಪ್ರಥಮ ದರ್ಜೆ ಗುಮಾಸ್ತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದು, ಮುಹಮ್ಮದ್ ಅಮಾನುಲ್ಲಾ ಅವರಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರೀಯ, ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ 87 ಕೆಜಿ ವಿಭಾಗದಲ್ಲಿ ವೈಟ್ ಲಿಫ್ಟಿಂಗ್ ನಲ್ಲಿ  ಸಾಧನೆ ಮಾಡಿದ್ದಾರೆ.

ಸಚಿವ ಝಮೀರ್ ಅಹ್ಮದ್ ನನ್ನ ಸಾಧನೆ ಗುರುತಿಸಿ ಸನ್ಮಾನ ಮಾಡಿ ಫಿನ್‍ಲ್ಯಾಂಡ್ ಗೆ ತೆರಳಲು 2.50 ಲಕ್ಷ ರೂ. ನೆರವು ನೀಡಿದ್ದು ಸಂತಸ ತಂದಿದೆ. ಇದರಿಂದ ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ಸಿಕ್ಕಿದೆ ಎಂದು ಖುದ್ಸಿಯಾ ನಝೀರ್ ಹೇಳಿದರು.

Similar News