ಪ್ರಕೃತಿ ವಿಕೋಪಗಳಿಗೆ ನೀಡುವ ಪರಿಹಾರ ಹೆಚ್ಚಿಸಲು ಕೇಂದ್ರಕ್ಕೆ ಸಚಿವ ಕೃಷ್ಣ ಭೈರೇಗೌಡ ಒತ್ತಾಯ

Update: 2023-06-13 18:20 GMT

ಹೊಸದಿಲ್ಲಿ, ಜೂ.13: ಬೆಳೆ ಹಾನಿ, ಬರಗಾಲ, ಅತಿವೃಷ್ಟಿ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಗೆ ನೀಡುವ ಪರಿಹಾರ ಹಣ ಬಹಳಷ್ಟು ಕಡಿಮೆ ಪ್ರಮಾಣದಲ್ಲಿದ್ದು ಅದನ್ನು ಪರಿಷ್ಕರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದ್ದಾರೆ.

ಮಂಗಳವಾರ ವಿವಿಧ ರಾಜ್ಯಗಳ ವಿಪತ್ತು ನಿರ್ವಹಣಾ ಸಚಿವರ ಜೊತೆಗೆ ಅಮಿತ್ ಶಾ ನಡೆಸಿದ ಸಭೆಯಲ್ಲಿ ಭಾಗಿಯಾದ ಅವರು, ಕೇಂದ್ರ ಸರಕಾರದಿಂದ ಬಿಡುಗಡೆಯಾಗುವ ಬರಗಾಲ, ಅತಿವೃಷ್ಠಿ, ಮಳೆ ಹಾನಿ, ಬೆಳೆ ಪರಿಹಾರ ಮೊತ್ತ ಕಡಿಮೆ ಇದ್ದು ಅದನ್ನು ಪರಿಷ್ಕರಣೆಯಾಗಬೇಕು ಎಂದು ಒತ್ತಾಯಿಸಿದರು.

ಸಭೆ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಮೊದಲನೆಯದಾಗಿ ಮಳೆ ಆಶ್ರಿತ ಪ್ರತಿ ಹೆಕ್ಟೇರ್ ಭೂಮಿಗೆ 8500 ರೂ.ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದೆ ಅದನ್ನು 20 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು, ನೀರಾವರಿ ಭೂಮಿಗೆ 17 ಸಾವಿರ ರೂ. ನೀಡಲಾಗುತ್ತಿದೆ ಇದನ್ನು 35 ಸಾವಿರರೂ.ಗೆ ಹೆಚ್ಚಿಸಬೇಕು. ತೋಟಗಾರಿಕೆ ಬೆಳೆ ಹಾನಿಗೆ 22 ಸಾವಿರ ರೂ.ಗಳಿಂದ 49 ಸಾವಿರರೂ.ಗಳಿಗೆ ಹೆಚ್ಚಿಸಲು ಮನವಿ ಮಾಡಿದ್ದೇನೆ ಎಂದರು.

ಇದು ಬಹಳಷ್ಟು ವರ್ಷಗಳಿಂದಿರುವ ಸಾರ್ವಜನಿಕರ ಒತ್ತಾಯವಾಗಿದೆ. ಸದ್ಯ ರಾಜ್ಯ ಸರಕಾರ ಕೈಯಿಂದ ಹಣ ಹಾಕಿ ಹೆಚ್ಚಿನ ಪರಿಹಾರ ನೀಡಲಾಗುತ್ತಿದೆ. ಇದು ರಾಜ್ಯ ಸರಕಾರಗಳಿಗೆ ಹೊರೆಯಾಗುತ್ತಿದೆ. ಕರ್ನಾಟಕದ ಎಸ್‍ಡಿಆರ್‍ಎಫ್‍ಗೆ ಈಗಾಗಲೆ ಅನುದಾನ ಕಡಿಮೆ ಬರುತ್ತಿದೆ. ಹೀಗಾಗಿ ಕೇಂದ್ರದಿಂದ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ಅಕ್ಟೋಬರ್ ನಲ್ಲಿ ಕೇಂದ್ರ ಸರಕಾರ ಪಕೃತಿ ವಿಕೋಪ ಮಾರ್ಗಸೂಚಿಯಲ್ಲಿ ನಿಯಮ ಬದಲಾಯಿಸಿದೆ. ಸರಕಾರ ನೀಡುವ ಪರಿಹಾರ ಮೊತ್ತದಲ್ಲಿ ವಿಮಾ ಕಂಪನಿಗಳು ವಿಮಾ ಮೊತ್ತವನ್ನು ಕಡಿತಗೊಳಿಸಿ ನೀಡುವ ನಿಯಮವನ್ನು ತೆಗೆದು ಹಾಕಬೇಕು, ಇದರಿಂದ ರೈತರು ಮತ್ತು ಸರಕಾರಕ್ಕೆ ನಷ್ಟವಾಗುತ್ತಿದ್ದು ವಿಮಾ ಕಂಪನಿಗಳಿಗೆ ದೊಡ್ಡ ಲಾಭವಾಗುತ್ತಿದೆ ಇದನ್ನು ಬದಲಾಯಿಸಬೇಕು ಎಂದು ಅವರು ಹೇಳಿದರು.

ಕಡೆಯದಾಗಿ ಸಿಡಿಲು ಮಳೆ ಜಾಸ್ತಿಯಾಗುತ್ತಿರುವ ಹಿನ್ನಲೆ ಅದರ ಮುನ್ಸೂಚನೆ ಪತ್ತೆ ಹಚ್ಚಬೇಕಿದೆ. ಅದಕ್ಕಾಗಿ ಡಾಪ್ಲರ್ ರಾಡಾರ್ ಅಳವಡಿಸಬೇಕು. ರಾಡಾರ್ ಅಳವಡಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

Similar News