ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಇತಿಶ್ರೀ ಹಾಡಲು ಡಿಸಿಎಂ ಡಿಕೆಶಿ ಸಂಕಲ್ಪ

Update: 2023-06-13 18:40 GMT

ಬೆಂಗಳೂರು, ಜೂ. 13: ನಗರದ ಘನತೆಗೆ ಕಪ್ಪುಚುಕ್ಕೆಯಾಗಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಕಲ್ಪ ಮಾಡಿರುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ನಗರದ ಪ್ರಮುಖ ಸಂಚಾರಿ ದಟ್ಟಣೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆಬ್ಬಾಳ ಜಂಕ್ಷನ್‍ಗೆ ಭೇಟಿ ನೀಡಿ ಮೇಲ್ಸೇತುವೆ ನಿರ್ಮಾಣ, ಸುತ್ತಮುತ್ತಲ ಪ್ರದೇಶದ ಪರಿಶೀಲನೆ ನಡೆಸಿ, ಈ ಭಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ, ಮೇಲ್ಸೇತುವೆ ಅಗಲೀಕರಣ ಹಾಗೂ ಹೆಬ್ಬಾಳ ಕೆರೆಯ ಸೌಂದರ್ಯಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 

ನಂತರ ಹೊರ ವರ್ತುಲ ರಸ್ತೆ, ನಾಗವಾರ ಮೇಲ್ಸೇತುವೆ, ಟೆಲಿಕಾಂ ಲೇಔಟ್‍ಗೆ ಭೇಟಿ ಮಾಡಿ ಅಲ್ಲಿ ನಡೆಯುತ್ತಿರುವ ಕೊಳಚೆ ನೀರು ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಮಹಿಳಾ ಪೌರ ಕಾರ್ಮಿಕರು ‘ನಮಗೆ ಸ್ಥಳೀಯ ಆಧಾರ್ ಹಾಗೂ ಮತದಾರರ ಗುರುತಿನ ಚೀಟಿ ಇಲ್ಲ, ಹೀಗಾಗಿ ಪೌರ ಕಾರ್ಮಿಕ ಗುರುತಿನ ಚೀಟಿಗೆ ಉಚಿತ ಟಿಕೆಟ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಡಿಸಿಎಂ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಹಾಗೂ ಮತ್ತಿತರ ಅಧಿಕಾರಿಗಳು ಇದ್ದರು.

Similar News