ಸುರ್ಜೆವಾಲಾ ಇದ್ದ ಸಭೆ ಸರಕಾರದ ಅಧಿಕೃತ ಸಭೆಯಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
Update: 2023-06-14 07:41 GMT
ಬೆಂಗಳೂರು: ಬೆಂಗಳೂರಿನ ಹೋಟೆಲ್ ಒಂದರಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಜೊತೆ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಭಾಗಿಯಾಗಿರುವ ಕುರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರ್ಜೆವಾಲಾ ಅವರು ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಪ್ರಾಸಂಗಿಕವಾಗಿ ಬಿಬಿಎಂಪಿ ಚುನಾವಣೆ ಬಗ್ಗೆಯೂ ಮಾತನಾಡಿದ್ದಾರೆ. ಇತ್ತ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಹೆಬ್ಬಾಳ ಸಂಚಾರದಟ್ಟಣೆ ಪರಿಶೀಲಿಸಲು ಡಿಸಿಎಂ ಶಿವಕುಮಾರ್ ಆ ಮಾರ್ಗದ ಮೂಲಕ ತೆರಳುತ್ತಿದ್ದರು, ಅವರು ಸುರ್ಜೇವಾಲರನ್ನು ಭೇಟಿ ಮಾಡಲು ತೆರಳಿದಾಗ ಜೊತೆಯಲ್ಲಿದ್ದ ಅಧಿಕಾರಿಗಳು ಕೂಡ ಅವರೊಂದಿಗೆ ತೆರಳಿ ಸೌಜನ್ಯದ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.
ಈ ಕುರಿತು ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಡುವುದಾದ್ರೆ ಕೊಡಲಿ ಎಂದು ಸಿದ್ದರಾಮಯ್ಯ ಹೇಳಿದರು.