ಬೆಂಗಳೂರು: ಚಾಕುವಿನಿಂದ ಇರಿದು ತಮ್ಮನಿಂದ ಅಣ್ಣನ ಕೊಲೆ

Update: 2023-06-14 13:10 GMT

ಬೆಂಗಳೂರು, ಜೂ.14: ಮದ್ಯ ಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಕೋಪಗೊಂಡು ತನ್ನ ಸ್ವಂತ ಅಣ್ಣನಿಗೆ ಚಾಕುವಿನಿಂದ ಇರಿದು ತಮ್ಮನೇ ಕೊಲೆಗೈದಿರುವ ಘಟನೆ ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ದೊಡ್ಡಗುಂಟೆ ನಿವಾಸಿ ಕಾರ್ತಿಕ್(30) ಕೊಲೆಯಾದ ವ್ಯಕ್ತಿಯಾಗಿದ್ದು, ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿದ್ದ ಮೃತನ ಸೋದರ ವಿಜಯ್‍ನನ್ನು ಪುಲಿಕೇಶಿನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ತನ್ನ ಅತ್ತಿಗೆ ಕರೆ ಮೇರೆಗೆ ಅಣ್ಣನ ಮನೆಗೆ ವಿಜಯ್ ಹೋಗಿದ್ದ. ಆಗ ಸೋದರರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೊಡ್ಡಗುಂಟೆಯಲ್ಲಿ ತನ್ನ ಪತ್ನಿ ಸಂಧ್ಯಾ ಹಾಗೂ ಕಾರ್ತಿಕ್ ವಾಸವಿದ್ದರು. ವಿಜಯ್ ಪ್ರತ್ಯೇಕವಾಗಿ ವಾಸವಾಗಿದ್ದ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಸೋದರರು ಜೀವನ ಸಾಗಿಸುತ್ತಿದ್ದರು. ಆದರೆ ವಿಪರೀತ ಮದ್ಯ ವ್ಯಸನಿಯಾದ ಕಾರ್ತಿಕ್, ಪ್ರತಿದಿನ ಮದ್ಯ ಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಈ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪ ಬೆಳೆದಿತ್ತು. ಗಂಡನ ಕಾಟ ಸಹಿಸಲಾರದೆ ಮೈದುನ ವಿಜಯ್‍ಗೆ ಕರೆ ಮಾಡಿ ಸಂಧ್ಯಾ ಗೋಳು ತೋಡಿಕೊಂಡಿದ್ದಳು. ಮನೆಗೆ ಬಂದು ನಿಮ್ಮ ಅಣ್ಣನಿಗೆ ಬುದ್ಧಿ ಮಾತು ಹೇಳುವಂತೆ ಆಕೆ ಮನವಿ ಮಾಡಿದ್ದಳು. ಅಂತೆಯೇ ತನ್ನ ಅಣ್ಣನ ಮನೆಗೆ ವಿಜಯ್ ತೆರಳಿದ್ದ. ಆಗ ಸೋದರರ ಮಧ್ಯೆ ಜಗಳವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Similar News