ಬಿಜೆಪಿಯ ಬಡವರ ವಿರೋಧಿ, ಪ್ರಧಾನಿ ಮೋದಿಯವರ ಶತ್ರುತ್ವ ನೀತಿ ಬಯಲು: ಸುರ್ಜೇವಾಲಾ ಕಿಡಿ

‘ಅನ್ನಭಾಗ್ಯ ಯೋಜನೆ’ಗೆ ಅಕ್ಕಿ ನೀಡದಕ್ಕೆ ಆಕ್ರೋಶ

Update: 2023-06-15 14:08 GMT

ಬೆಂಗಳೂರು, ಜೂ. 15: ‘ಕಾಂಗ್ರೆಸ್ ಸರಕಾರಕ್ಕೆ ಹೆಚ್ಚಿನ ಅಕ್ಕಿ ವಿತರಣೆಗೆ ಬಿಜೆಪಿಯ ಕೈಗೊಂಬೆಯಾಗಿರುವ ಎಫ್‍ಸಿಐ ನಿರಾಕರಿಸಿರುವುದು ಬಿಜೆಪಿಯ  ಬಡವರ ವಿರೋಧಿ ಹಾಗೂ ಪ್ರಧಾನಿ ಮೋದಿಯವರ ಶತ್ರುತ್ವ ನೀತಿಯ್ನು ಬಯಲು ಮಾಡಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಕಿಡಿಕಾರಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕಾಂಗ್ರೆಸ್ ಸರಕಾರದ ಗ್ಯಾರಂಟಿ ಅನ್ನಭಾಗ್ಯ ಯೋಜನೆಯಲ್ಲಿ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಉಚಿತ ನೀಡಲಾಗುವುದು. ಈ ಯೋಜನೆಯಲ್ಲಿ ರಾಜ್ಯದ 1.28 ಕೋಟಿ ಕುಟುಂಬಗಳು, ಸುಮಾರು 4.42 ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ಕಾಂಗ್ರೆಸ್ ಸರಕಾರ ಇದಕ್ಕೆ ಬೇಕಾಗುವ 11ಸಾವಿರ ಕೋಟಿ ರೂ.ನೀಡಲು ಸಿದ್ಧವಿದೆ. ಆದರೂ ಮೋದಿ ಸರಕಾರ ಆಹಾರ ನಿಗಮಕ್ಕೆ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡದಂತೆ ನಿರ್ದೇಶನ ನೀಡಿದೆ’ ಎಂದು ದೂರಿದ್ದಾರೆ.

‘ಆಹಾರ ನಿಗಮದ ಬಳಿ ಹೆಚ್ಚುವರಿ ಅಕ್ಕಿ ದಾಸ್ತಾನು ಇದೆ. ಆದರೂ ಎಫ್‍ಸಿಐ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಅಕ್ಕಿ ಮಾರಾಟ ಮಾಡಲು ಮುಂದಾಗಿದ್ದು, ಕರ್ನಾಟಕಕ್ಕೆ ನೀಡಲು ಸಿದ್ಧವಿಲ್ಲ. ಇದು ಭ್ರಷ್ಟ ಬಿಜೆಪಿಯನ್ನು ಬಡಿದೊಡಿಸಿದ ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ಮತ್ತು ಬಡವರ ವಿರುದ್ಧ ಬಿಜೆಪಿ ಹಾಗೂ ಮೋದಿ ಸರಕಾರಕ್ಕೆ ಇರುವ ದ್ವೇಷವನ್ನು ತೋರುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

‘ತನ್ನ ಸೋಲಿನಿಂದಾಗಿ ಜನರಿಗೆ ಅನ್ನ ನಿರಾಕರಿಸುವಷ್ಟರ ಮಟ್ಟಿಗೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಕುರುಡರಾಗಿದ್ದಾರಾ? ಎಫ್‍ಸಿಐ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಅಕ್ಕಿ ಮಾರಾಟ ಮಾಡಲು ಸಿದ್ಧವಿದೆ. ಆದರೆ, ರಾಜ್ಯಕ್ಕೆ ಉತ್ತಮ ದರದಲ್ಲಿ ಅಕ್ಕಿ ನೀಡಲು ನಿಬರ್ಂಧ ಹೇರಿರುವುದೇಕೆ? ರಾಜ್ಯ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ನೀಡಬಾರದು ಎಂಬ ಒಂದೇ ಉದ್ದೇಶದಿಂದ ಈ ತೀರ್ಮಾನ ಮಾಡಿದೆಯಲ್ಲವೇ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಕಾಂಗ್ರೆಸ್ ಸರಕಾರ ಎಫ್‍ಸಿಐಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದ ನಂತರ ಕೇಂದ್ರ ಸರಕಾರವು ಕೇವಲ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಮಾರಾಟ ಮಾಡುವಂತೆ ನಿರ್ದೇಶನ ನೀಡಿರುವುದು ಸ್ವಲ್ಪ ಅತಿಯಾದ ಕಾಕತಾಳೀಯವಲ್ಲವೇ?, ಬಿಜೆಪಿ ಹಾಗೂ ಮೋದಿ ಸರಕಾರದ ಬೆಂಬಲವಿರುವ ದೊಡ್ಡ ವ್ಯಾಪಾರಿಗಳ ಕೂಟ ಬಡವರ ಅಕ್ಕಿಯನ್ನು ಕಸಿಯಲು ಮುಂದಾಗಿದೆಯೇ?’ ಎಂದು ಸುರ್ಜೆವಾಲಾ ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯದ ಸಂಸದರು, ಕೇಂದ್ರದ ಮಂತ್ರಿಗಳು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಕಂಡು ಮೌನವಾಗಿರುವುದೇಕೆ? ಇಷ್ಟಾದರೂ ಅವರು ಸಂಸದ ಹಾಗೂ ಸಚಿವ ಸ್ಥಾನದಲ್ಲಿ ಒಂದು ದಿನ ಮುಂದುವರಿಯಲು ಯೋಗ್ಯರೇ? ರಾಜ್ಯದ ಆರೂವರೆ ಕೋಟಿ ಜನರಿಗೆ ದ್ರೋಹ ಬಗೆದಿರುವ ಅವರು ಕೂಡಲೇ ಯಾಕೆ ರಾಜೀನಾಮೆ ನೀಡಬಾರದು?’ ಎಂದು ಅವರು ಎಚ್ಚರಿಸಿದ್ದಾರೆ.

‘ಒಂದು ವಿಚಾರ, ಬಿಜೆಪಿ ಸರಕಾರ ಎಷ್ಟೇ ಅಡ್ಡಿಪಡಿಸಿದರು ಕಾಂಗ್ರೆಸ್ ಸರಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಬಡ ಕುಟುಂಬಗಳ ವಿರೋಧಿ ನೀತಿ ಹಾಗೂ ದ್ವೇಷವನ್ನು ಕನ್ನಡಿಗರು ಕ್ಷಮಿಸುವುದಿಲ್ಲ’ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಟೀಕಿಸಿದ್ದಾರೆ.

Similar News